Awareness Programme – ಸಮಾಜ ಎಷ್ಟೇ ಮುಂದುವರೆದರೂ ಅನೇಕ ಕಡೆ ದಲಿತರ ಮೇಲಿನ ದೌರ್ಜನ್ಯಗಳು, ಮಹಿಳೆಯರ ಮೇಲಿನ ದೌರ್ಜನ್ಯಗಳು ನಡೆಯುತ್ತಲೇ ಇದೆ. ಈ ಕುರಿತು ದಲಿತರು ಜಾಗೃತರಾದಾಗ ದೌರ್ಜನ್ಯಗಳನ್ನು ತಡೆಯಲು ಸಾಧ್ಯ ಎಂದು ಜೀವಿಕ ಸಂಘಟನೆಯ ಪರಿಶಿಷ್ಟ ಜಾತಿ ಹಾಗೂ ಪಂಗಡ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯೆ ಜೀವಿಕ ರತ್ನಮ್ಮ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸಿದ್ದಾರ್ಥ ಸೇವಾ ಸಂಸ್ಥೆ ಹಾಗೂ ವರ್ಷ ರೂರಲ್ ಡೆವೆಲಪ್ ಮೆಂಟ್ ಅಂಡ್ ಎಜುಕೇಷನಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಹಾಗೂ ಪಂಗಡ ಹಾಗೂ ಮಹಿಳಾ ದೌರ್ಜನ್ಯ, ನಾಗರೀಕ ಹಕ್ಕು ಮತ್ತು ರಕ್ಷಣಾ ಕಾಯ್ದೆ ಗಳ ಕುರಿತು ಅರಿವು ನೆರವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಲಿತರ ಮೇಲಿನ ದೌರ್ಜನ್ಯಗಳು, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ದ ಕಾನೂನಿನಲ್ಲಿ ಕಠಿಣ ಶಿಕ್ಷೆಯಿದ್ದರೂ ಸಹ ಅನೇಕ ಕಡೆ ಇಂದಿಗೂ ದೌರ್ಜನ್ಯಗಳು ನಡೆಯುತ್ತಿರುವ ಬಗ್ಗೆ ಕೇಳುತ್ತಲೇ ಇರುತ್ತೇವೆ. ಅದಕ್ಕೆ ಮುಖ್ಯ ಕಾರಣ ನಮ್ಮ ದಲಿತರಿಗೆ ಕಾನೂನಿನ ಅರಿವು ಇಲ್ಲದೇ ಇರುವುದು. ಎಲ್ಲರೂ ಕಾನೂನಿನ ಅರಿವು ಪಡೆದುಕೊಂಡಾಗ ತಮಗೆ ಸಂವಿಧಾನಾತ್ಮಕವಾಗಿ ಸಿಗುವಂತಹ ಎಲ್ಲಾ ಸೌಲಭ್ಯಗಳು, ಹಕ್ಕುಗಳನ್ನು ಪಡೆದುಕೊಳ್ಳಬಹುದು. ಜೊತೆಗೆ ದಲಿತರು ಹಾಗೂ ಮಹಿಳೆಯರು ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಮಾಹಿತಿ ಪಡೆದುಕೊಂಡು ತಮ್ಮ ಸುತ್ತಮುತ್ತಲಿನ ಜನರಿಗೂ ಅರಿವು ಮೂಡಿಸುವ ಕೆಲಸ ಮಾಡಬೇಕೆಂದರು.
ನಂತರ ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಹಲವಾರು ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ತಮ್ಮ ಗ್ರಾಮಗಳಿಗೆ ಬಂದು ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಜನರೂ ಸಹ ಅನಾರೋಗ್ಯಕ್ಕೆ ಗುರಿಯಾಗುವುದಕ್ಕೂ ಮುನ್ನಾ ಆ ಕಾಯಿಲೆ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆಗ ಆರೋಗ್ಯಕರವಾದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಲಕ್ಷ್ಮೀಪತಿ ರೆಡ್ಡಿ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಣೇಶ್, ಮುಖಂಡರಾದ ಎಂ.ವೇಣು, ಮೇಲೂರು ಮಂಜುನಾಥ್, ಮುನಿವೆಂಕಟಪ್ಪ ಸೇರಿದಂತೆ ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವರು ಇದ್ದರು.