ಇನ್ನೇನು ಕೆಲವೇ ದಿನಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಗಲಿದ್ದು, ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದುವ ಮೂಲಕ ಉತ್ತಮ ಸಾಧನೆ ಮಾಡಬೇಕು, ಜೊತೆಗೆ ಜಿಲ್ಲೆಯಲ್ಲಿ ಗುಡಿಬಂಡೆ ಪ್ರಥಮ ಸ್ಥಾನ ಬರುವಂತೆ ಮಾಡಬೇಕೆಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿದ ಶಾಸಕರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

SSLC – ಉತ್ತಮ ಅಂಕ ಪಡೆದು ಪೋಷಕರಿಗೆ ಒಳ್ಳೆಯ ಹೆಸರು ತಂದುಕೊಡಿ
ಈ ವೇಳೆ ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಾ, 10ನೇ ತರಗತಿ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಪ್ರಮುಖವಾದ ಘಟ್ಟ. ಆದರೆ ಹಲವು ವಿದ್ಯಾರ್ಥಿಗಳು ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಇದರಿಂದ ಕಡಿಮೆ ಅಂಕಗಳು ಬಂದು ತಮ್ಮ ಪೋಷಕರಿಗೆ ಸಮಸ್ಯೆಯಾಗುತ್ತದೆ. ಜೊತೆಗೆ ತಮಗೆ ಒಳ್ಳೆಯ ಕಾಲೇಜುಗಳಲ್ಲಿ ಓದಬೇಕೆಂಬ ಮನಸ್ಸು ಇರುತ್ತದೆ. ಆದರೆ ತಾವು ಪಡೆದುಕೊಂಡ ಅಂಕಗಳು ಒಳ್ಳೆಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆಯಲು ಆಗುವುದಿಲ್ಲ. ಆಗ ನಿಮ್ಮ ಪೋಷಕರು ನಮ್ಮಂತಹ ರಾಜಕೀಯ ನಾಯಕರ ಬಳಿ ಬಂದು ಸೀಟ್ ಗಾಗಿ ಕೇಳಬೇಕು. ಆದ್ದರಿಂದ ನೀವುಗಳು ಕಠಿಣ ಪರಿಶ್ರಮದಿಂದ ಓದುವ ಮೂಲಕ ಉತ್ತಮ ಅಂಕಗಳನ್ನು ಪಡೆದು ತಮ್ಮ ಪೋಷಕರಿಗೆ ಒಳ್ಳೆಯ ಹೆಸರು ತಂದುಕೊಡಬೇಕು ಎಂದರು.
SSLC – ಜಿಲ್ಲೆಗೆ ಮೊದಲ ಸ್ಥಾನ ಪಡೆಯಬೇಕು
ಇದೇ ಸಮಯದಲ್ಲಿ ಮಾತನಾಡಿದ ಶಾಸಕರು ಈಗಾಗಲೇ ನನ್ನ ಕ್ಷೇತ್ರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೊದಲ ಸ್ಥಾನ ಬರಲು ಶ್ರಮಿಸುವಂತೆ ಅಧಿಕಾರಿಗಳು ಹಾಗೂ ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಿದ್ದೇನೆ. ಜೊತೆಗೆ ಹಲವು ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ಸಹ ಮಾಡಿದ್ದೇನೆ. ಗುಡಿಬಂಡೆ ಕಳೆದೆರಡು ವರ್ಷಗಳ ಹಿಂದೆ ಗುಡಿಬಂಡೆ ರಾಜ್ಯ ಮಟ್ಟಕ್ಕೆ ಮೊದಲ ಸ್ಥಾನ ಬಂದಿತ್ತು. ಇದೀಗ ಜಿಲ್ಲಾ ಮಟ್ಟದಲ್ಲಿ ಮೊದಲ ಸ್ಥಾನ ಬರಲು ಎಲ್ಲರೂ ಶ್ರಮಿಸಬೇಕು. ಶಿಕ್ಷಣಕ್ಕೆ ಸಂಬಂಧಿಸಿದಂತೆ ತಮಗೆ ಏನೇ ಸಮಸ್ಯೆಗಳಿದ್ದರೂ ನನ್ನನ್ನು ಸಂಪರ್ಕ ಮಾಡಿ ಅದನ್ನು ಬಗೆಹರಿಸುವಂತಹ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಮಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ರಾಜಶೇಖರ್ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ಮುಖಂಡರು ಹಾಜರಿದ್ದರು.
1 Comment
Pingback: After SSLC : ಎಸ್.ಎಸ್.ಎಲ್.ಸಿ ನಂತರ ತೆಗೆದುಕೊಳ್ಳಬಹುದಾದ ಬೆಸ್ಟ್ ಡಿಪ್ಲೊಮಾ ಕೋರ್ಸ್‌ಗಳು...! - ISM Kannada News