Farmers Protest – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ವಿವಿಧ ಕಡೆ ರೈತರು ಆಲೂಗಡ್ಡೆ ಸೇರಿದಂತೆ ವಿವಿಧ ಬೆಳೆಗಳನ್ನು ಇಟ್ಟಿದ್ದು, ಇದೀಗ ಅಮಸರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ತಮ್ಮ ಬೆಳೆ ನೀರಿಲ್ಲದೇ ಒಣಗುತ್ತಿದೆ ಎಂದು ಸಮರ್ಪಕವಾಗಿ ವಿದ್ಯುತ್ ಖಂಡಿಸಿ ಬೆಸ್ಕಾಂ ಕಚೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು.

ಈ ಸಮಯದಲ್ಲಿ ಮಾತನಾಡಿದ ಅಖಿಲ ಕರ್ನಾಟಕ ರೈತ ಸಂಘಟನೆಯ ಜಿಲ್ಲಾ ಸಹ ಸಂಚಾಲಕ ಹೆಚ್.ಪಿ.ಲಕ್ಷ್ಮೀನಾರಾಯಣ ಎಲ್ಲೆಡೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ನೀರಿನ ಹಾಗೂ ವಿದ್ಯುತ್ ಪೂರೈಕೆ ಕಷ್ಟವಾಗುತ್ತಿದೆ. ಜೊತೆಗೆ ತಾವು ಸಾಲಸೋಲ ಮಾಡಿ ಬೆಳೆದಿರುವ ಬೆಳೆ ಎಲ್ಲಿ ಕೈಕೊಡುತ್ತದೆಯೋ ಎಂಬ ಆತಂಕದಲ್ಲಿ ರೈತರಲ್ಲಿ ಕಾಡುತ್ತಿದೆ. ಬೆಸ್ಕಾಂ ನಿರ್ಲಕ್ಷ್ಯದಿಂದ ಬಹುತೇಕ ಕೈಗೆ ಬಂದಿರುವ ಆಲೂಗಡ್ಡೆ ಸೇರಿದಂತೆ ಹಲವು ಬೆಳೆ ನೀರಿಲ್ಲದೆ ಒಣಗುತ್ತಿದೆ. ವಿದ್ಯುತ್ ಕೊರತೆಯಿಲ್ಲದಿದ್ದರೂ ವಿದ್ಯುತ್ ನಿರ್ವಹಣೆ ಹಾಗೂ ಹಂಚಿಕೆ ಮಾಡುವಲ್ಲಿ ಬೆಸ್ಕಾಂ ಅಧಿಕಾರಿಗಳು ವಿಫಲರಾಗಿದ್ದಾರೆ. ಮೂರು ತಿಂಗಳ ಹಿಂದೆ ಬೆಸ್ಕಾಂ ಅಧಿಕಾರಿಗಳಿಗೆ ಹಳೇಗುಡಿಬಂಡೆ, ಬೊಮ್ಮಗಾನಹಳ್ಳಿ, ಪೋಲಂಪಲ್ಲಿ ಸೇರಿದಂತೆ ವಿವಿಧ ಗ್ರಾಮಗಳಿಗೆ ವಿದ್ಯುತ್ ವಿತರಣೆಗಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಲು ಸಲಹೆ ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಸಹಾಯಕ ಇಂಜಿನಿಯರ್ ಸದಾಶಿವ ಪ್ರತಿಭಟನಕಾರರೊಂದಿಗೆ ಮಾತನಾಡಿ.. ನಾವು ಇಂದಿನಿಂದ ಹಗಲು ರಾತ್ರಿ ಶ್ರಮವಹಿಸಿ ವಿದ್ಯುತ್ ವಿತರಣೆ ಮಾಡಿಸಲಾಗುವುದು ಎಂದು ತಿಳಿಸಿದರು. ಈ ಸಮಯದಲ್ಲಿ ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಮಂಜುನಾಥ ನಾಯ್ಡು ಹಾಜರಿದ್ದರು. ನಂತರದಲ್ಲಿ ಎಫ್ 6 ವಿದ್ಯುತ್ ಹೆಚ್ಚುವರಿ ಪೂರೈಕೆ ಲೈನ್ ಪ್ರಾರಂಭವಾಗಬೇಕು. ಇಲ್ಲವಾದರೆ ಸೋಮವಾರದಿಂದ ಸಾವಿರಾರು ರೈತರೊಂದಿಗೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.
ಈ ವೇಳೆ ಅಖಿಲ ಕರ್ನಾಟಕ ರೈತ ಸಂಘಟನೆಯ ಜಿಲ್ಲಾ ಸಹ ಸಂಚಾಲಕ ಹೆಚ್.ಪಿ.ಲಕ್ಷ್ಮೀನಾರಾಯಣ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಪೋಲಂಪಲ್ಲಿ ಮಂಜುನಾಥ್, ರೈತ ಸಂಘದ ಮನೋಜ್, ಬೊಮ್ಮಗಾನಹಳ್ಳಿ ಕೃಷ್ಣಪ್ಪ, ಶ್ರೀನಿವಾಸ್, ದಿನ್ನೆಗಂಗಪ್ಪ, ಬೊಮ್ಮನಹಳ್ಳಿ ಅಶ್ವತ್ಥರೆಡ್ಡಿ, ಗ್ಯಾದರಮಾಕಲಹಳ್ಳಿ ಗೋಪಾಲರೆಡ್ಡಿ ಸೇರಿದಂತೆ ಹಲವರಿದ್ದರು.