ಕನ್ನಡ ಭಾಷೆ ನಮ್ಮ ಉಸಿರಾಗಿರಬೇಕು, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಲು ಬೇಕಾದ ಕಾರ್ಯಕ್ರಮಗಳನ್ನು ರೂಪಿಸಲು ಕಚೇರಿ ಅನುಕೂಲವಾಗಲಿದ್ದು, ಕಸಾಪ ನೂತನ ಅಧ್ಯಕ್ಷರು ಕೆಲಸ ಮಾಡಲಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ತಾಲೂಕು ಪಂಚಾಯತಿ ಕಚೇರಿಯಲ್ಲಿ (Local News) ಕಸಾಪ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಸುಬ್ಬಾರೆಡ್ಡಿ ಮಾತನಾಡಿದರು.
ತಾಲೂಕಿನಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಈಗಾಗಲೇ ಭೂಮಿ ಮಂಜೂರಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಬೇಕಾದ ಅನುದಾನ ಬಿಡುಗಡೆಗೊಳಿಸಿ ಭವ್ಯವಾದ ಕನ್ನಡ ಭವನ ನಿರ್ಮಾಣ ಮಾಡಲು ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು. ಭವ್ಯವಾದ ಕನ್ನಡ ಭವನ ನಿರ್ಮಾಣ ಆಗುವ ತನಕ ತಾತ್ಕಾಲಿಕವಾಗಿ ತಾಲೂಕು ಪಂಚಾಯತಿ ಕಚೇರಿಯ ಅವರಣದಲ್ಲಿರುವ ಕಟ್ಟಡದಲ್ಲೇ ಕಸಾಪ ಕಾರ್ಯ ಕಲಾಪಗಳು ನಡೆಯಲಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಕಾರ್ಯಕ್ರಮಗಳು ಹೆಚ್ಚು ನಡೆಸಿ ಕನ್ನಡಾಭಿಮಾನ, ಸಾಹಿತ್ಯ ಚಟುವಟಿಕೆಗಳ ಮೂಲಕ ಮಾತೃ ಭಾಷೆಯ ಮೇಲೆ ಅಭಿಮಾನ ಹೆಚ್ಚಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಕಸಾಪ ನೂತನ ಅಧ್ಯಕ್ಷ ಬಿ. ಮಂಜುನಾಥ್ ಮಾತನಾಡಿ ಕಸಾಪ ಕಚೇರಿ ಪ್ರಾರಂಭ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಹಾಗೂ ತಾಪಂ ಇಒ ಹೇಮಾವತಿ ರವರಿಗೆ ಧನ್ಯವಾದಗಳನ್ನು ಸಲ್ಲಿಸಿ, ಆದಷ್ಟು ಬೇಗ ಸರ್ಕಾರದ ವತಿಯಿಂದ ಅನುದಾನ ಬಿಡುಗಡೆಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾಪಂ ಇಒ ಹೇಮಾವತಿ, ಬಿಇಒ ಕೃಷ್ಣಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ವಿ. ನಾರಾಯಣಸ್ವಾಮಿ, ಕಸಾಪ ನಿಕಟ ಪೂರ್ವ ಅಧ್ಯಕ್ಷರಾದ ಸ.ನ. ನಾಗೇಂದ್ರ, ಅನುರಾಧ ಆನಂದ್, ಸುಬ್ಬರಾಯಪ್ಪ, ಸಬ್ ಇನ್ಸ್ಪೆಕ್ಟರ್ ಗಣೇಶ್, ನೌಕರರ ಸಂಘದ ಪದಾಧಿಕಾರಿಗಳು, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು, ಕಸಾಪ ಪದಾಧಿಕಾರಿಗಳು ಸೇರಿದಂತೆ ಹಲವರು ಇದ್ದರು.