Price Hike : ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ. ಮನೆಯ ಹೆಂಗಸರಿಗೆ 10 ರೂಪಾಯಿ ಕೊಟ್ಟರೇ, ಪುರುಷರಿಂದ 20 ರೂಪಾಯಿ ಕಸಿದುಕೊಳ್ಳುತ್ತಿದೆ ಎಂದು ಸಂಸದ ಡಾ.ಕೆ.ಸುಧಾಕರ್ ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ದ ಕಿಡಿಕಾರಿದರು.
ಇತ್ತೀಚಿಗೆ ಕಾಂಗ್ರೇಸ್ ಸರ್ಕಾರ ಬಸ್ ಟಿಕೆಟ್ ದರ ಏರಿಕೆಯ ಕುರಿತು ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಸಂಸದ ಸುಧಾಕರ್ ರವರು, ಕಾಂಗ್ರೇಸ್ ಸರ್ಕಾರ ಮೊದಲಿನಿಂದಲೂ ಇದೇ ರೀತಿಯ ಗಿಮಿಕ್ ರಾಜಕಾರಣ ಮಾಡುತ್ತಾ ಅಧಿಕಾರಕ್ಕೆ ಬರುತ್ತಿದೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣ ಮಾಡಲು ಅವಕಾಶ ಕೊಟ್ಟು, ಪುರುಷರಿಂದ ಅದರ ಡಬಲ್ ಹಣ ವಸೂಲಿ ಮಾಡುತ್ತಿದ್ದಾರೆ. ಒಂದು ಕಡೆ 10 ರೂಪಾಯಿ ಬೇಡ ಅಂತಾ ಹೇಳಿ ಮತ್ತೊಂದು ಕಡೆ 20 ರೂಪಾಯಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಜನರು ಕಾಂಗ್ರೇಸ್ ಬಗ್ಗೆ ಅರಿವು ಪಡೆದುಕೊಳ್ಳಬೇಕು ಎಂದರು.
ಇನ್ನೂ ಜಲಜೀವನ್ ಮಿಷನ್ ಯೋಜನೆ ಬಡವರಿಗೆ ಅನುಕೂಲವಾಗಲು ಜಾರಿ ಮಾಡಿದ್ದಾರೆ. ಪ್ರಧಾನಿ ಮೋದಿಯವರು ಪ್ರತಿಯೊಬ್ಬರಿಗೂ ನೀರು ಸಿಗಬೇಕೆಂದು ಈ ಯೋಜನೆ ಜಾರಿ ಮಾಡಿದ್ದು, ಈ ಯೋಜನೆಯ ಕಾಮಗಾರಿಗಳಲ್ಲಿ ಯಾರಾದರೂ ಅಕ್ರಮ ಅಥವಾ ಕಳಪೆ ಕಾಮಗಾರಿ ಕೈಗೊಂಡರೇ ಅವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇನ್ನೂ ಗಡಿ ಭಾಗದ ತಾಲೂಕುಗಳಲ್ಲಿ ಗಾಂಜಾ, ಅಕ್ರಮ ಮದ್ಯ ಮಾರಾಟ ಹೆಚ್ಚಾಗುತ್ತಿದೆ. ಕಿರಾಣಿ ಅಂಗಡಿಗಳಲ್ಲೂ ಸಹ ಮದ್ಯ ಸಿಗುತ್ತಿದೆ. ಇದರಿಂದಾಗಿ ಹೆಚ್ಚು ಅಪಘಾತಗಳು, ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಮೊನ್ನೆ ನಡೆದ ದಿಶಾ ಸಭೆಯಲ್ಲೂ ಈ ಕುರಿತು ಮಾತನಾಡಿದ್ದೇನೆ. ಈ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ತಿಳಿಸಿದ್ದೇನೆ. ಜಿಲ್ಲಾಡಳಿತ ಈ ಕುರಿತು ಕ್ರಮ ತೆಗೆದುಕೊಳ್ಳದೇ ಇದ್ದರೇ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.