Local News – ಗುಡಿಬಂಡೆ ಪಟ್ಟಣದಲ್ಲಿ ಯುಜಿಡಿ ಕೆಲಸ ಸೇರಿದಂತೆ ನೈರ್ಮಲ್ಯ ಕಾಪಾಡುವಂತಹ ಕಾಮಗಾರಿಗಳನ್ನು ಕೈಗೊಂಡು ನೈರ್ಮಲ್ಯ ಕಾಪಾಡುವುದು ನನ್ನ ಜವಾಬ್ದಾರಿ ಹಾಗೂ ಮುಖ್ಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ಕೋಟ್ಯಂತರ ರೂಪಾಯಿಗಳ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದಲ್ಲಿ ಪಟ್ಟಣ ಪಂಚಾಯತಿಯ ಘನತಾಜ್ಯ ವಿಲೇವಾರಿ ಘಟಕದ ಬಳಿ ಸುಮಾರು 3 ಕೋಟಿ ವೆಚ್ಚದ ಮಲ ತಾಜ್ಯ ಶುದ್ದೀಕರಣ ಘಟಕ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣದಲ್ಲಿರುವ ಮಲ ತ್ಯಾಜ್ಯವನ್ನು ಶುದ್ದಿಕರಣ ಮಾಡಲು ಘಟಕ ನಿರ್ಮಾಣ ಮಾಡಲಾಗುತ್ತಿದೆ. ಪಟ್ಟಣದಲ್ಲಿ ಯುಜಿಡಿ ಮಾಡಬೇಕೆಂದುಕೊಂಡಿದ್ದು ಅನೇಕ ವಾರ್ಡ್‍ಗಳಲ್ಲಿ ಬಂಡೆ ಸಮಸ್ಯೆ ಇರುವುದರಿಂದ ಕೊರೆಯಲು ಕಷ್ಟಕರವಾಗುತ್ತಿರುವುದರಿಂದ ಸದ್ಯಕ್ಕೆ ಇಲ್ಲಿ ಶುದ್ದಿಕರಣ ಮಾಡಲಾಗುತ್ತದೆ, ಮುಂದಿನ ದಿನಗಳಲ್ಲಿ ಪಟ್ಟಣಕ್ಕೆ ನೀರನ್ನು ಪೂರೈಸಲು ಅಮೃತ 2 ಯೋಜನೆಯಡಿಯಲ್ಲಿ ಪೈಪ್ ಲೈನ್ ಅಳವಡಿಸಲಾಗುತ್ತದೆ ಅಂತಹ ಸಮಯದಲ್ಲಿ ಯುಜಿಡಿ ಮಾಡಲು ಅವಕಾಶ ಆದರೆ ಯುಜಿಡಿ ಮಾಡಲಾಗುತ್ತದೆ. ಪಟ್ಟಣದಲ್ಲಿ ನೈರ್ಮಲ್ಯ ಕಾಪಾಡುವುದೇ ನನ್ನಉದ್ದೇಶ ಆದ್ದರಿಂದ ಈ ಘಟಕ ಪ್ರಾರಂಭಿಸಲಾಗುತ್ತಿದೆ. ಗುತ್ತಿಗೆದಾರರಿಗೆ 5 ವರ್ಷ ನಿರ್ವಹಣೆಯಿದೆ. ಕಾಮಗಾರಿ ಸಹ ಕಳಪೆಯಾಗದಂತೆ ಗುಣಮಟ್ಟದ ಕೆಲಸ ಮಾಡಬೇಕೆಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

ಇದೇ ಸಮಯದಲ್ಲಿ ರಾಮಪಟ್ಟಣ ಮುಖ್ಯ ರಸ್ತೆ ಅಗಲೀಕರಣದ ಕುರಿತು ಮಾತನಾಡಿ, ಈಗಾಗಲೇ ರಾಮಪಟ್ಟಣ ರಸ್ತೆಯಲ್ಲಿ ಬರುವಂತಹ ನಿವಾಸಿಗಳು ನನ್ನ ಬಳಿ ಮನವಿ ಮಾಡಿದ್ದಾರೆ. ಹೆಚ್ಚು ಅಡಿಗಳಷ್ಟು ರಸ್ತೆ ಅಗಲೀಕರಣವಾದರೇ ಅವರ ಆಸ್ತಿ ಹೋಗುತ್ತದೆ ಎಂದು ಕಡಿಮೆ ಅಡಿಗಳಷ್ಟು ರಸ್ತೆ ಅಗಲೀಕರಣ ಮಾಡುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕನಿಷ್ಟ ರಸ್ತೆ ಮದ್ಯ ಭಾಗದಿಂದ 20 ಅಡಿಯಷ್ಟು ರಸ್ತೆಯನ್ನು ಅಗಲೀಕರಣ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಈ ವೇಳೆ ಪ.ಪಂ ಅಧ್ಯಕ್ಷ ಎ.ವಿಕಾಸ್, ಉಪಾಧ್ಯಕ್ಷ ಗಂಗರಾಜು, ಮುಖ್ಯಾಧಿಕಾರಿ ಸಬಾ ಶಿರೀನ್, ಆರಕ್ಷಕ ವೃತ್ತ ನಿರೀಕ್ಷಕ ನಯಾಜ್ ಬೇಗ್, ಉಪನಿರೀಕ್ಷಕ ಗಣೇಶ್, ಪ.ಪಂ.ಸದಸ್ಯರಾದ ಇಸ್ಮಾಯಿಲ್ ಅಜಾದ್, ಬಷೀರ್, ರಾಜೇಶ್, ಅಂಬರೀಶ್, ಆದಿನಾರಾಯಣಪ್ಪ, ಪ.ಪಂ ಸಿಬ್ಬಂದಿಯಾದ ಚಕ್ರಪಾಣಿ ಸೇರಿದಂತೆ ಹಲವರು ಇದ್ದರು.
1 Comment
Pingback: Summer: ಬೇಸಿಗೆಯಲ್ಲಿ ನೀರಿಗೆ ಸಮಸ್ಯೆಯಾಗದಂತೆ ಎಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಶಾಸಕ ಸುಬ್ಬಾರೆಡ್ಡಿ ಅಧಿಕ