DK Shivakumar- ರಾಜ್ಯ ಕಾಂಗ್ರೇಸ್ ಸರ್ಕಾರ ಗ್ಯಾರಂಟಿಗಳ ಕಾರಣದಿಂದಲೇ ಅಧಿಕಾರಕ್ಕೆ ಬಂದಿದೆ ಎಂಬ ಆರೋಪಗಳು ಪ್ರತಿಪಕ್ಷಗಳು ಮಾಡುತ್ತಲೇ ಇದ್ದಾರೆ. ಇದರ ಜೊತೆಗೆ ರಾಜ್ಯದಲ್ಲಿ ಬಸ್ ದರ ಏರಿಕೆಯ ಜೊತೆಗೆ ಬೆಂಗಳೂರಿನಲ್ಲಿ ನೀರಿನ ಬೆಲೆ ಸಹ ಏರಿಕೆಯಾಗಲಿದೆ ಎಂಬ ಚರ್ಚೆ ನಡೆಯುತ್ತಿದೆ. ಜ.28 ರಂದು ಡಿಸಿಎಂ ಡಿ.ಕೆ ಶಿವಕುಮಾರ್ ಜೊತೆ ಅಧಿಕಾರಿಗಳು ಜಲಮಂಡಳಿ ಕಚೇರಿಯಲ್ಲಿ ಸಭೆ ನಡೆಸಲಾಗಿದ್ದು, ಈ ಸಭೆಯಲ್ಲಿ ಎಲ್ಲಾ ಫ್ರೀ ಕೊಡ್ತಾ ಇದ್ರೆ ಸರ್ಕಾರ ನಡೆಸೋದು ಹೇಗೆ ಎಂದು ಗರಂ ಆಗಿದ್ದಾರೆ. ಉಚಿತ ಗ್ಯಾರಂಟಿಗಳಿಂದ ಸರ್ಕಾರಕ್ಕಾಗಿರುವ ಹೊರೆಯ ಕುರಿತು ಮಾತನಾಡಿದ್ದಾರೆ.
ಬೆಂಗಳೂರಿನ ಕಾವೇರಿ ಭವನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ರವರ ನೇತೃತ್ವದಲ್ಲಿ ಬಿಬಿಎಂಪಿ, ಬಿಡಿಎ, BWSSB ಅಧಿಕಾರಿಗಳ ಜೊತೆಗಿನ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ ಮಾತನಾಡಿದರು. ಸರ್ಕಾರಿ ನೌಕರರು ಸಂಬಳ ಜಾಸ್ತಿ ಮಾಡಿ ಅಂತಾ ಹೇಳ್ತಾರೆ, ವಿದ್ಯುತ್ ಫ್ರೀ, ನೀರು ಫ್ರೀ ಅಂದ್ರೇ ಹೇಗಾಗುತ್ತದೆ. ಒಂದು ಪೈಸೆ ಆದ್ರೂ ಬಿಲ್ ಕಟ್ಟಬೇಕು ಅಲ್ವಾ, ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಬೇಕು, ಎಲ್ಲವನ್ನೂ ಫ್ರೀ ಕೊಟ್ಟರೇ ಸರ್ಕಾರ ನಡೆಸೋದಾದ್ರೂ ಹೇಗೆ, ಇನ್ಮೇಲೆ ಫ್ರೀ ಎಲ್ಲಾ ಕೊಡೋಕಾಗಲ್ಲ ಎಂದು ಬೆಂಗಳೂರಿನಲ್ಲಿ ಶ್ರೀಘ್ರವೇ ನೀರಿನ ದರ ಏರಿಕೆ ಮಾಡುವ ಬಗ್ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇನ್ನೂ ಇನ್ನೇನು ಬೇಸಿಗೆ ಶುರುವಾಗಲಿದೆ. ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳಿಗೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಳೆದ ವರ್ಷ ನೀರಿಗಾಗಿ ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಿತ್ತು. ಆದರೆ ಈ ಬಾರಿ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಜಲಮಂಡಳಿ ವಾರ್ಷಿಕವಾಗಿ ಒಂದು ಸಾವಿರ ಕೋಟಿ ನಷ್ಟದಲ್ಲಿದೆ. ನಷ್ಟವನ್ನು ಭರಿಸಲು ಹಾಗೂ ಸಂಸ್ಥೆಯನ್ನು ಉಳಿಸಲು ಬೆಲೆ ಏರಿಕೆ ಮಾಡುವ ಅನಿರ್ವಾಯತೆ ಇದೆ. ಒಂದು ಲೀಟರ್ ನೀರಿಗೆ ಒಂದು ಪೈಸೆ ಆದ್ರೂ ಕೊಟ್ಟು ಸಹಕರಿಸಬೇಕು. ಬಡವರಾದ್ರೂ, ಸ್ಲಂ ನಲ್ಲಿದ್ದವರಾದರೂ ಒಂದು ಪೈಸೆ ಆದ್ರೂ ಕೊಟ್ಟು ನೀರು ಬಳಕೆ ಮಾಡಬೇಕು. ಎಲ್ಲವನ್ನೂ ಫ್ರೀಯಾಗಿ ಕೊಡೊಕೆ ಆಗೊಲ್ಲ ಎಂದು ಹೇಳಿದ್ದಾರೆ.