Local News- ಗುಡಿಬಂಡೆ ಪಟ್ಟಣ ಪಂಚಾಯತಿ (Gudibande Town Panchayath) ವ್ಯಾಪ್ತಿಯಲ್ಲಿ ಕೊರೆಸಲಾಗಿರುವ ಬೋರ್ ವೆಲ್ ಗಳ ಸದ್ಯದ ಸ್ಥಿತಿ, ಹಾಳಾಗಿರುವ ಬೋರ್ ವೆಲ್ ಗಳ ವಿವರ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಾಕೀತು ಮಾಡಿದರು. ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಪ.ಪಂ ಅಧ್ಯಕ್ಷ ವಿಕಾಸ್ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ (Local News) ಭಾಗವಹಿಸಿ ಮಾತನಾಡಿದರು.
ಬೋರ್ ವೆಲ್ ಗಳ ಮಾಹಿತಿ ನೀಡಲು ಸೂಚನೆ:
ಪಟ್ಟಣದ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉದ್ಬವಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು. ಪಟ್ಟಣದ ವ್ಯಾಫ್ತಿಯಲ್ಲಿ ಎಷ್ಟು ಬೋರ್ ವೆಲ್ ಗಳಿವೆ, ಯಾವೆಲ್ಲಾ ಬೋರ್ ವೆಲ್ ಗಳು ಕೆಟ್ಟಿವೆ. ಎಷ್ಟು ಸಕ್ರೀಯವಾಗಿ ಕೆಲಸ ಮಾಡುತ್ತಿವೆ ಎಂಬ ವಿವರಗಳನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಪ.ಪಂ ಇಂಜನೀಯರ್ ಚಕ್ರಪಾಣಿ ಪಟ್ಟಣದ ವ್ಯಾಪ್ತಿಯಲ್ಲಿ 54 ಬೋರ್ ವೆಲ್ ಗಳಿವೆ, 12 ಬೋರ್ ವೆಲ್ ಗಳು ಕೆರೆಯಲ್ಲಿ ಮುಳಗಿವೆ ಎಂದು ಉಳಿದ ಬೋರ್ ವೆಲ್ ಗಳ ಮಾಹಿತಿ ಸರಿಯಾಗಿ ನೀಡಲಿಲ್ಲ. ಇದಕ್ಕೆ ಆಕ್ರೋಷಗೊಂಡ ಶಾಸಕರು ಬೋರ್ ವೆಲ್ ಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡಬೇಕೆಂದು ತಾಕೀತು ಮಾಡಿದರು.
ವಾಣಿಜ್ಯ ಮಳಿಗೆಗಳ ಹರಾಜಿಗೆ ಕ್ರಮ ವಹಿಸಲು ಸೂಚನೆ:
ಬಳಿಕ ಪ.ಪಂ. ವತಿಯಿಂದ ನಿರ್ಮಿಸಲಾದ ವಾಣಿಜ್ಯ ಮಳಿಗೆಗಳು ಹರಾಜಿಗೆ ಇಟ್ಟಾಗ ಯಾರೂ ಸಹ ಹರಾಜಿನಲ್ಲಿ ಭಾಗಿಯಾಗುತ್ತಿಲ್ಲ. ಡಿಪಾಸಿಟ್ ಮೊತ್ತ ಹೆಚ್ಚಾಗಿರುವ ಕಾರಣ ಯಾರೂ ಹರಾಜಿನಲ್ಲಿ ಭಾಗಿಯಾಗುತ್ತಿಲ್ಲ. ಆದ್ದರಿಂದ ಮಳಿಗೆಗಳ ಡಿಪಾಜಿಟ್ ಮೊತ್ತ ಕಡಿಮೆ ಮಾಡಬೇಕೆಂದು ಸದಸ್ಯರು ಆಗ್ರಹಿಸಿದರು. ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಕಡತವನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿಸುವಂತೆ ಶಾಸಕರು ಹಾಗೂ ಸದಸ್ಯರು ಪ.ಪಂ. ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಶೀಘ್ರ ನಿವೇಶನ ನೀಡಲು ಕ್ರಮ ವಹಿಸಲು ಸೂಚನೆ:
ಇನ್ನೂ ಸುಮಾರು ವರ್ಷಗಳಿಂದ ಪಟ್ಟಣದ ಮುಖ್ಯರಸ್ತೆ ಅಗಲೀಕರಣದ ವೇಳೆ ಮನೆ ಕಳೆದುಕೊಂಡವರಿಗೆ ನಿವೇಶನ ನೀಡಲು ಇಲ್ಲಿಯವರೆಗೂ ಆಗಿಲ್ಲ. ಈ ಬಗ್ಗೆ ಮನೆ ಕಳೆದುಕೊಂಡವರಿಗೆ ನಮ್ಮ ವಿರುದ್ದ ತೀವ್ರ ಅಸಮಧಾನಸಹ ಇದೆ. ಆದ್ದರಿಂದ ಕೂಡಲೇ ಈ ಕುರಿತು ಕ್ರಮ ವಹಿಸಬೇಕೆಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂದಿನ ವಾರ ಬೆಂಗಳೂರಿನ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಭೇಟಿ ನೀಡಿ ಮಂಜೂರಾಗಿರುವ ನಿವೇಶನಗಳ ಹಕ್ಕುಪತ್ರಗಳನ್ನು ಪಡೆದು ಫಲಾನುಭವಿಗಳಿಗೆ ನೀಡಬೇಕು ಎಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು.
ಬೀದಿ ನಾಯಿ, ಕೋತಿಗಳ ಕಾಟಕ್ಕೆ ತಡೆ ಹಾಕಲು ಆಗ್ರಹ:
ಇನ್ನೂ ಗುಡಿಬಂಡೆ ಪಟ್ಟಣದ ವ್ಯಾಪ್ತಿಯಲ್ಲಿ ಬೀದಿ ನಾಯಿಗಳು ಹಾಗೂ ಕೋತಿಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸದಸ್ಯರುಗಳು ಪ.ಪಂ ಮುಖ್ಯಾಧಿಕಾರಿಗಳಲ್ಲಿ ಒತ್ತಾಯಿಸಿದರು. ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ ನೀಡಲು ಸಭೆಯಲ್ಲಿ ಅನುಮತಿ ದೊರೆಯಿತು. ಇನ್ನೂ ಕೋತಿಗಳ ನಿಯಂತ್ರಣ ತಮ್ಮ ವ್ಯಾಫ್ತಿಗೆ ಬರಲ್ಲ ಎಂದರು. ಈ ವೇಳೆ ಶಾಸಕ ಸುಬ್ಬಾರೆಡ್ಡಿ ರವರು ವಲಯ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಭೆಗೆ ಕರೆಸಿ ಕೂಡಲೇ ಕೋತಿಗಳ ಹಾವಳಿ ತಡೆಗಟ್ಟಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.
ರಾಮಪಟ್ಟಣ ರಸ್ತೆ ಅಗಲೀಕರಣಕ್ಕೆ ಒತ್ತಾಯ:
ಇನ್ನೂ ಪಟ್ಟಣದ ರಾಮಪಟ್ಟಣ ರಸ್ತೆ ತುಂಬಾ ಕಿರಿದಾಗಿದ್ದು, ಶಾಲಾ ಕಾಲೇಜುಗಳಿಗೆ ಹೋಗುವಾಗ ತುಂಬಾನೆ ಸಮಸ್ಯೆ ಎದುರಿಸಬೇಕಾಗಿದೆ. ಈಗಾಗಲೇ ರಾಮಪಟ್ಟಣ ರಸ್ತೆ ಅಗಲೀಕರಣ ಮಾಡಲು ಪ.ಪಂ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಸಹ ತೆಗೆದುಕೊಳ್ಳಲಾಗಿತ್ತು. ಆದರೆ ಈ ಸಂಬಂಧ ಪ.ಪಂ. ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು. ಈ ಸಂಬಂಧ ಕೂಡಲೇ ಸಂಬಂಧಪಟ್ಟ ಕಡತವನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಿ ಕ್ರಮ ವಹಿಸುವಂತೆ ಪಪಂ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಈ ವೇಳೆ ಪ.ಪಂ. ಅಧ್ಯಕ್ಷ ವಿಕಾಸ್, ಉಪಾಧ್ಯಕ್ಷ ಗಂಗರಾಜು, ಮುಖ್ಯಾಧಿಕಾರಿ ಶ್ರೀನಿವಾಸ್, ಸದಸ್ಯರಾದ ಇಸ್ಮಾಯಿಲ್ ಬಾಬು, ವೀಣಾ ನಿತಿನ್, ಬಷೀರಾ, ರಾಜೇಶ್, ಮಂಜುಳಾ, ಅನುಷಾ, ಜಿ.ರಾಜೇಶ್, ಬಷೀರ್, ನಗೀನಾ ಸೇರಿದಂತೆ ಪ.ಪಂ. ಸಿಬ್ಬಂದಿ ಹಾಜರಿದ್ದರು.