Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಬೀಚಗಾನಹಳ್ಳಿ ಹಾಲು ಉತ್ಪಾದಕರ ಸಂಘವನ್ನು ಮಾದರಿ ಸಂಘವನ್ನಾಗಿ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಬೀಚಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ಎನ್.ಅಶ್ವತ್ಥಪ್ಪ ತಿಳಿಸಿದರು.
ತಾಲ್ಲೂಕಿನ ಬೀಚಗಾನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಶ್ವತ್ತಪ್ಪ ಅಧ್ಯಕ್ಷರಾಗಿ, ನರಸಿಂಹಮೂರ್ತಿ ಉಪಾಧ್ಯಕ್ಷರಾಗಿ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದ ನಂತರ ಮಾತನಾಡಿದರು. ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಿರ್ದೇಶಕರು ತನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕಾರ ನೀಡಿದ್ದು, ನೂತನ ಆಡಳಿತ ಮಂಡಳಿಯವರ ಸಹಕಾರದೊಂದಿಗೆ ಸಂಘದ ಮತ್ತು ರೈತರ ಅಭಿವೃದ್ಧಿಗೆ ಹೆಚ್ಚಿನ ಒತ್ತುಕೊಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು. ಮುಂದಿನ 5 ವರ್ಷಗಳ ಅವಧಿಯಲ್ಲಿ ಹೈನುಗಾರರ ಶ್ರೇಯೋಭಿವೃದ್ಧಿಗೆ ದುಡಿಯುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಹಾಲು ಉತ್ಪಾದಕರು ಹಾಗೂ ನಿರ್ದೇಶಕರು ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಮುಂದಿನ ಐದು ವರ್ಷ ಹೈನುಗಾರರಿಗೆ ತಲುಪಬೇಕಾದ ಸೌಲಭ್ಯಗಳನ್ನು ತಲುಪಿಸಿ, ಹಾಲು ಉತ್ಪಾದನೆ ಕಡೆ ಹೆಚ್ಚು ಗಮನ ನೀಡಿ ಹೈನುಗಾರರು ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಕೆಲಸ ಮಾಡುತ್ತೇನೆ. ಶೀಘ್ರದಲ್ಲೇ ಚೀಮುಲ್ ಚುನಾವಣೆ ಸಹ ನಡೆಯಲಿದ್ದು, ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಎಲ್ಲಾ ಮುಖಂಡರು, ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು, ಮುಖಂಡರನ್ನು ಭೇಟಿ ಮಾಡಿ ಅವರ ಒಪ್ಪಿಗೆಯ ಮೇರೆಗೆ ಚೀಮುಲ್ ಚುನಾವಣೆಗೆ ನಿಲ್ಲುತ್ತೇನೆ ಎಂದರು.
ಸಂಘದ ಉಪಾಧ್ಯಕ್ಷ ಬಿ. ಜಿ.ನರಸಿಂಹಮೂರ್ತಿ ಮಾತನಾಡಿ ಸಂಘದ ಅಭಿವೃದ್ಧಿಗೆ ಹೆಚ್ಚು ಸಮಯ ಮೀಸಲಿಡಲಾಗುವುದು. ಪ್ರತಿವರ್ಷ ಬಡವರನ್ನು ಗುರುತಿಸಿ, ಸರಕಾರದ ಸೌಲಭ್ಯಗಳನ್ನು ತಲುಪಿಸಲು ಶ್ರಮಿಸುತ್ತೇನೆ ಎಂದರು. ಬಳಿಕ ರೈತ ಮುಖಂಡ ಬಲರಾಮಪ್ಪ ಮಾತನಾಡಿ, ಸಂಘಕ್ಕೆ ಹಾಲು ಮಾರಾಟ ಮಾಡುವ ರೈತರ ಹಿತ ಕಾಪಾಡುವ ಕೆಲಸವನ್ನು ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಮಾಡಬೇಕಿದೆ, ಒಂದು ಕಾಲದಲ್ಲಿ ತಾಲೂಕಿನಲ್ಲಿ ಅತ್ಯುತ್ತಮ ಸಂಘ ಎಂಬ ಪ್ರಶಸ್ತಿ ಪಡೆದು ಕೊಂಡಿತ್ತು ಆದರೆ ನಂತರ ಆ ಸ್ಥಾನ ಕಳೆದುಕೊಂಡಿದ್ದು ಈಗ ಆ ಕಾಲವನ್ನು ಮರುಕಳಿಸ ಬೇಕಿದೆ, ಸಂಘಕ್ಕೆ ಕೆಲವರು ಗುಣಮಟ್ಟದ ಹಾಲನ್ನು ಮಾರಾಟ ಮಾಡುತ್ತಿಲ್ಲ, ಇದರಿಂದ ಇತರೆ ರೈತರಿಗೂ ನಷ್ಟ ಆಗುತ್ತಿದೆ ಹಾಗಾಗಿ ಕಟ್ಟು ನಿಟ್ಟಾಗಿ ಗುಣಮಟ್ಟದ ಹಾಲು ತರುವಂತೆ ಮಾಡಿ ಬಿಎಂಸಿ ಕೇಂದ್ರ ವಾಪಸ್ಸು ತರಬೇಕು ಎಂದು ತಿಳಿಸಿದರು.
ಬೀಚಗಾನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗಾಗಿ ಜ.9 ರಂದು ನಡೆದಿದ್ದ ಚುನಾವಣೆಯಲ್ಲಿ ಅರುಣ್ ಕುಮಾರ್, ಎನ್.ಅಶ್ವತಪ್ಪ, ಚಿನ್ನಪ್ಪಯ್ಯ, ನರಸಿಂಹಮೂರ್ತಿ, ಪೆದ್ದನ್ನ, ಬಿ.ವಿ.ಸಿದ್ದಪ್ಪ, ಸುಬ್ಬರಾಯಪ್ಪ, ಬಿ.ಜಿ. ನರಸಿಂಹಮೂರ್ತಿ, ಬಿ. ಸಿ.ಅಶ್ವತಪ್ಪ, ನಿಸ್ಸಾರ್ ಬಾಷಾ, ಕೃಷ್ಣಪ್ಪ, ನಾಗಮಣಿ, ಮಂಜುಳಾ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಜ. 17ರಂದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗಾಗಿ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಚುನಾವಣಾ ಅಧಿಕಾರಿಯಾಗಿ ನಾಗರಾಜ್ ಚುನಾವಣೆ ನಡೆಸಿದರು.
ಈ ಸಂದರ್ಭದಲ್ಲಿ ಬೀಚಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಮುಖಂಡರಾದ ನರೇಂದ್ರ, ಮಹದೇವಪ್ಪ, ಮಂಜುನಾಥ್ ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರಾಜೇಶ್, ಸಿಬ್ಬಂದಿ ಸೇರಿದಂತೆ ಹಲವರು ಇದ್ದರು.