Local News – ಮೊಬೈಲ್ ಸೇರಿದಂತೆ ದುಶ್ಚಟಗಳಿಂದ ದೂರ ಸರಿದು ಶಿಕ್ಷಣದ ಕಡೆ ಹೆಚ್ಚಿನ ಗಮನಹರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಧೀಶ ಮಂಜುನಾಥಚಾರಿ ರವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ವಿ.ಆರ್ ಅಕಾಡೆಮಿ ಪದವಿ ಪೂರ್ವ ಕಾಲೇಜ್‍ನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಪುರಸಭೆ, ತಾಲೂಕು ಆಡಳಿತ ಮತ್ತು ತಾ.ಪಂ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಯುವ ದಿನೋತ್ಸವದ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದ ಅವರು ಇತ್ತೀಚಿನ ದಿನಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮಾಧಕ ವಸ್ತುಗಳಿಗೆ ಮತ್ತು ಮೊಬೈಲ್ ಗೀಳಿಗೆ ದಾಸರಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಮೊಬೈಲ್ ಗೀಳಿನಿಂದ ಕಾಲಹರಣ ಮಾಡದೆ ಶ್ರದ್ದಾಭಕ್ತಿಯಿಂದ ಓದಿನ ಕಡೆ ಹೆಚ್ಚಿನ ಗಮನ ನೀಡುವ ಮೂಲಕ ಗುರಿ ಸಾಧಿಸಿ ತಮ್ಮ ಉತ್ತಮ ಜೀವನ ರೂಪಿಸಿಕೊಳ್ಳಬೇಕು.
ವಿದ್ಯಾರ್ಥಿ ಜೀವನದಲ್ಲಿ ಅನೇಕ ತಿರುವುಗನ್ನೊಳಗೊಂಡಿರುತ್ತೆದೆ. ಹಾಗಾಗಿ ಗುರಿ ಸಾಧನೆಗಾಗಿ ಮತ್ತು ಜ್ಞಾನ ಸಂಪಾದನೆಗಾಗಿ ಓದಿ ವಿಚಾರವಂತರಾಗಬೇಕಿದೆ. ಶೇ.100 ಅಂಕಗಳನ್ನು ಪಡೆಯಬೇಕೆಂದು ಓದುವಂತಹ ವಿದ್ಯೆಗಿಂತ ಸಕಾರಾತ್ಮಕ ಜೀವನದ ಮಾರ್ಗಕ್ಕಾಗಿ ಓದಬೇಕಿದೆ ಎಂದ ಅವರು ಸಣ್ಣ ಸಣ್ಣ ಆಸೆ-ಆಕಾಂಕ್ಷೆಗಳು ಈಡೇರಲಿಲ್ಲ, ಬದುಕಿನಲ್ಲಿ ಸಿಗಬೇಕಾದದ್ದು ಸಿಗುತ್ತಿಲ್ಲ ಎಂದು ನಿರಾಸೆಯಿಂದ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಗಳು ತೆಗೆದುಕೊಳ್ಳಬಾರದು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಸತ್ಯನಾರಾಯಣರೆಡ್ಡಿ ಮಾತನಾಡಿದರು. ಈ ವೇಳೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ, ಉಪಾಧ್ಯಕ್ಷ ಜಿ.ಎಸ್ ರಾಮಾಂಜಿ, ಕಾರ್ಯದರ್ಶಿ ಪ್ರಸನ್ನಕುಮಾರ, ಖಜಾಂಚಿ ಮಂಜುನಾಥ್, ಸಹಾಯಕ ಸರ್ಕಾರಿ ಅಭಿಯೋಜಕ ಚಿನ್ನಸ್ವಾಮಿ, ಸಿಡಿಪಿಒ ಕೆ.ವಿ.ರಾಮಚಂದ್ರ, ಹಿರಿಯ ವಕೀಲರಾದ ಫಯಾಜ್ ಬಾಷಾ, ಗುರುನಾಥ್, ವೆಂಕಟೇಶ್ ಸೇರಿದಂತೆ ಹಲವರು ಇದ್ದರು.