HMPV – ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ HMPV ಪತ್ತೆಯಾಗಿದ್ದು, ಇದನ್ನು ICMR ದೃಢಪಡಿಸಿದೆ. ಜೊತೆಗೆ ಗುಜರಾತ್ ನಲ್ಲೂ ಸಹ ಒಂದು ಪ್ರಕರಣ ವರದಿಯಾಗಿದೆ ಎಂದು ತಿಳಿದುಬಂದಿದೆ.. ಕೋವಿಡ್ ವೈರಸ್ ಕಾಣಿಸಿಕೊಂಡ ಐದು ವರ್ಷದ ಬಳಿಕ ಮತ್ತೆ ದೇಶದಲ್ಲಿ ವೈರಸ್ ಹಾವಳಿ ಶುರುವಾಗಿದೆ. ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ಏಕಾಏಕಿ ಚೀನಾದಲ್ಲಿ ಹರಡುತ್ತಿದ್ದು, ಇದೀಗ ಭಾರತಕ್ಕೂ ಕಾಲಿಟ್ಟಿದೆ. ಬೆಂಗಳೂರಿನಲ್ಲಿ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಎರಡು ಪ್ರಕರಣಗಳು ಪತ್ತೆಯಾಗಿದ್ದು, ಈ ವೈರಸ್ ಹರಡಿದ್ದಾದರೂ ಹೇಗೆ ಎಂಬ ಪ್ರಶ್ನೆ ಉದ್ಬವಿಸಿದೆ.
ಇಂದು (ಜ.06) ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ HMPV ವೈರಸ್ ಪತ್ತೆಯಾಗಿತ್ತು. ಇದು ದೃಢಪಟ್ಟ ಮೂರು ಗಂಟೆಗಳ ಅವಧಿಯಲ್ಲೇ ಇದೀಗ ಮತ್ತೊಂದು ಮೂರು ತಿಂಗಳ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ. ಇಂದು ಒಟ್ಟು ಇಬ್ಬರು ಮಕ್ಕಳಲ್ಲಿ ವೈರಸ್ ಪತ್ತೆಯಾಗಿದೆ. ICMR ನಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ICMR ದೇಶದಾದ್ಯಂತ ಉಸಿರಾಟಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಮಾಡಲು ICMR ನಡೆಸುತ್ತಿರುವ ಪ್ರಯತ್ನಗಳ ಭಾಗವಾಗಿ ಎರಡು ಪ್ರಕರಣಗಳನ್ನು ಗುರ್ತಿಸಲಾಗಿದೆ. ವಿಶ್ವದಾದ್ಯಂತ HMPV ವೈರಸ್ ಹರಡುತ್ತಿದೆ. HMPV ಒಂದು ಉಸಿರಾಟದ ವೈರಸ್ ಆಗಿದೆ. ಸಾಮಾನ್ಯವಾಗಿ ಶೀತವನ್ನು ಹೋಲುವಂತ ರೋಗಲಕ್ಷಣಗಳನ್ನು ಹೊಂದಿದೆ. ಇದು ಹೆಚ್ಚಾಗಿ ಮಕ್ಕಳು, ಹಿರಿಯರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆಯಿರುವಂತಹವರಿಗೆ ಬೇಗ ಹರಡಬಹುದಾಗಿದೆ ಎಂದು ಹೇಳಲಾಗಿದೆ.
ಇನ್ನೂ ಈ ಕುರಿತು ಕರ್ನಾಟಕದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಮಗುವಿಗೆ ಯಾವುದೇ ಸಮಸ್ಯೆಯಿಲ್ಲ. ಮಕ್ಕಳ ಸ್ವಾಬ್ ಅನ್ನು ಹೆಚ್ಚಿನ ಪರೀಕ್ಷೆಗಾಗಿ ಪುಣೆಗೆ ಕಳುಹಿಸಲು ಚರ್ಚೆ ನಡೆಸುತ್ತೇವೆ. ICMR, ಕೇಂದ್ರ ಮಾಹಿತಿ ಪಡೆದು ಮುಂದಿನ ಚರ್ಚೆ ನಡೆಸುತ್ತೇವೆ. ಎಲ್ಲಾ ಕಡೆ ಟೆಸ್ಟ್ ಮಾಡಿದರೂ ವಯಸ್ಸಾದವರಲ್ಲಿ, ಮಕ್ಕಳಲಲ್ಲಿ ಈ ವೈರಸ್ ಕಾಣಿಸಿಕೊಳ್ಳಬಹುದು. ಈ ಕಾರಣದಿಂದ ಎಚ್ಚರಿಕೆ ವಹಿಸುವುದು ಅಗತ್ಯವಾಗಿದ್ದು, ಈ ಸಂಬಂಧ ಮಾರ್ಗಸೂಚಿಯನ್ನು ಸಹ ಪ್ರಕಟಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನೂ ಗುಜರಾತ್ ನಲ್ಲಿ ಮೊದಲ HMPV ವೈರಸ್ ಪತ್ತೆಯಾಗಿದೆ. ಗುಜರಾತ್ ನ 2 ತಿಂಗಳ ಮಗುವಿನಲ್ಲಿ ಈ ವೈರಸ್ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಕರ್ನಾಟಕದಲ್ಲಿ ಎರಡು HMPV ವೈರಸ್ ಪ್ರಕರಣ ದೃಢಪಡಿಸಿದ ಕೆಲವೇ ಗಂಟೆಗಳಲ್ಲಿ ಗುಜರಾತ್ ನಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದ್ದು, ಸೋಂಕಿತ ಮಗುವನ್ನು ಅಹಮದಾಬಾದ್ ನ ಚಂದ್ ಖೇಡಾ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.