ಸದ್ಯ ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಜೋರು ಸದ್ದು ಮಾಡುತ್ತಿದ್ದು, ಈ ಸಂಬಂಧ ಬಿಜೆಪಿ ಪಕ್ಷ ಸೇರಿದಂತೆ ರೈತರೂ ಸಹ ಹೋರಾಟ ಮಾಡುತ್ತಿದ್ದಾರೆ. ವಿಜಯಪುರದಿಂದ ಆರಂಭವಾದ ಈ ವಕ್ಫ್ ವಿವಾದ ಇದೀಗ ರಾಜ್ಯವ್ಯಾಪಿ ಹಬ್ಬಿಕೊಂಡಿದೆ. ರೈತರ ಜಮೀನಿನಿಂದ ಆರಂಭವಾದ ಈ ವಿವಾದ ಸದ್ಯ ಮಠ, ಹಿಂದೂ ದೇವಾಲಯಗಳು, ಸರ್ಕಾರಿ ಕಟ್ಟಡಗಳಿಗೂ ತಲುಪಿದೆ. ಇದೀಗ ಚಿಕ್ಕಬಳ್ಳಾಪುರದಲ್ಲೂ ಸಹ ಒಂದು ಘಟನೆ ನಡೆದಿದೆ. ಸರ್.ಎಂ.ವಿಶ್ವೇಶ್ವರಯ್ಯನವರು ಓದಿದ ಸರ್ಕಾರಿ ಶಾಲೆಯ ಜಾಗದ ಪಹಣಿಯಲ್ಲೂ ಇದೀಗ (Waqf) ವಕ್ಫ್ ಬೋರ್ಡ್ ಎಂದು ನಮೂದಾಗಿದ್ದು, ಚರ್ಚೆಗೆ ಕಾರಣವಾಗಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಕಂದವಾರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೇ ಸರ್.ಎಂ.ವಿಶ್ವೇಶ್ವರಯ್ಯನವರು ವ್ಯಾಸಂಗ ಮಾಡಿದ್ದರು. ಈ ಶಾಲೆಯ ಹೆಸರಿನಲ್ಲಿದ್ದ 19 ಗುಂಟೆ ಜಾಗ ಇದೀಗ ದಾವೂದ್ ಷಾ ವಲಿ ದರ್ಗಾ ಸುನ್ನಿ ವಕ್ಫ್ ಸತ್ತು ಎಂದು ಬದಲಾಗಿದೆ. 2015-16 ನೇ ವರ್ಷದ ಪಹಣಿಯಲ್ಲಿ ಶಾಲೆಯ ಬದಲಾಗಿ ವಕ್ಫ್ ಸ್ವತ್ತು ಎಂದು ನಮೂದಾಗಿದೆ. ಇನ್ನೂ ಸರ್ಕಾರಿ ಶಾಲೆಯ ಜಾಗದ ಉಳಿವಿಗಾಗಿ ಗ್ರಾಮಸ್ಥರು ಹಾಗೂ ಶಿಕ್ಷಕರಿಂದ ನಿರಂತರ ಹೋರಾಟ ಸಹ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳ ಹಿಂದೆ ಶಾಲಾ ಆವರಣದಲ್ಲಿ ದರ್ಗಾ ತಲೆಯೆತ್ತಿದೆ. ಇದೀಗ ಗ್ರಾಮಸ್ಥರು ಕಾನೂನಿನ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ವಕ್ಫ್ ವಿವಾದ ಕರಾವಳಿ ಹಾಗೂ ಬೀದರ್ ಜಿಲ್ಲೆಗೂ ವ್ಯಾಪಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಕಸಬದ ಸರ್ಕಾರಿ ಜಾಗವನ್ನು ವಿಟ್ಲ ಜುಮಾ ಮಸೀದಿಯ ಅಧ್ಯಕ್ಷರ ಹೆಸರಿಗೆ ನೊಂದಣಿಯಾಗಿದೆ. ವಕ್ಫ್ ಕಾಯ್ದೆ ಬಳಸಿ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಲಾಗಿದೆ ಎಂದು ಹೇಳಲಾಗಿದೆ. ಅದೇ ರೀತಿ ಬೀದರ್ ಜಿಲ್ಲೆಯ ಕಮಲಾನಗರ ತಾಲೂಕಿನ ತೋರಗ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸಹ ವಕ್ಫ್ ಗೆ ಸೇರ್ಪಡೆಯಾಗಿದೆ. ತೋರಣ ಗ್ರಾಮದ ಸ.ನಂ 64ರಲ್ಲಿ 4 ಎಕರೆ 29 ಗುಂಟೆ ಜಾಗ ಇದೀಗ ವಕ್ಫ್ ಆಸ್ತಿಯಾಗಿದೆ. ತೋರಣ ಗ್ರಾಮಸ್ಥರೇ ದೇಣಿಗೆ ಸಂಗ್ರಹಿಸಿ ಆಸ್ಪತ್ರೆಗೆ ನೀಡಿದ್ದ ಜಾಗ ಇದೀಗ ವಕ್ಫ್ ಗೆ ಸೇರಿದ್ದು, ರೋಗಿಗಳು ಹಾಗೂ ಗ್ರಾಮಸ್ಥರು ಕಂಗಾಲಾಗಿದ್ದಾರೆ. 2013 ಕ್ಕೂ ಮೊದಲು ಇದು ಸರ್ಕಾರಿ ಜಾಗವಾಗಿತ್ತು. ಇದೀಗ ವಕ್ಫ್ ಆಸ್ತಿ ಹೇಗಾಯ್ತು ಎಂದು ಸ್ಥಳೀಯರು ಪ್ರಶ್ನೆ ಮಾಡುತ್ತಿದ್ದಾರೆ ಜೊತೆಗೆ ಇದು ಸರಿಯಾಗದೇ ಇದ್ದರೇ ಪ್ರತಿಭಟನೆ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.