ಸಮಾಜದಲ್ಲಿ ಅನೇಕ ಕಳ್ಳರು ಮನೆಗಳೂ ಸೇರಿದಂತೆ ವಿವಿಧ ಕಡೆ ಕಳ್ಳತನ ಮಾಡಿ ನಗ ನಾಣ್ಯ ದೋಚಿ ಪರಾರಿಯಾಗುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಕಳ್ಳ ಮಾತ್ರ ಕಳ್ಳತನ ಮಾಡಿ ಒಂದು ತಿಂಗಳಲ್ಲಿ ಕದ್ದಿದ್ದನ್ನು ವಾಪಸ್ಸು ಕೊಡುತ್ತೇನೆ ಎಂದು ಪತ್ರ ಬರೆದಿರುವ ವಿಚಿತ್ರ ಘಟನೆ ನಡೆದಿದೆ. ಈ ವಿಚಿತ್ರ ಘಟನೆ ತಮಿಳುನಾಡಿದ ಟುಟಿಕೋರಿಯನ್ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದೆ. ಸದ್ಯ ಈ ಸುದ್ದಿ ತಮಿಳುನಾಡಿನಲ್ಲಿ ಭಾರಿ ವೈರಲ್ ಆಗುತ್ತಿದೆ.
ತಮಿಳುನಾಡಿನ ಟುಟಿಕೋರಿನ್ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಕೆಲವು ದಿನಗಳ ಹಿಂದೆಯಷ್ಟೆ ಚೆನೈಗೆ ಹೋಗಿ ವಾಪಸ್ಸಾಗಿದ್ದ 79 ವರ್ಷದ ನಿವೃತ್ತ ಶಿಕ್ಷಕ ಚಿಟ್ಟಿರೈ ಸೆಲ್ವಿನ್ ರವರ ನಿವಾಸದಲ್ಲಿ ಕಳ್ಳತನವಾಗಿತ್ತು. ಕಳ್ಳನೋರ್ವ 60 ಸಾವಿರ ನಗದು, ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಕದ್ದು ಪರಾರಿಯಾಗಿದ್ದ. ಕಳೆದ ಜೂನ್ 26 ರಂದು ಸೆಲ್ವಿನ್ ರವರ ನಿವಾಸದ ಬಳಿ ಮನೆಕೆಲಸದಾಕೆ ಬಂದಿದ್ದಾರೆ. ಮನೆಯ ಬಾಗಿಲು ತೆರೆದಿರುವುದನ್ನು ಮನೆಗೆಲಸದಾಕೆ ನೋಡಿದ್ದಾರೆ. ಕೂಡಲೇ ಮನೆ ಮಾಲೀಕ ಸೆಲ್ವಿನ್ ರವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಬಳಿಕ ಸೆಲ್ವಿನ್ ಮನೆಗೆ ಬಂದು ನೋಡಿದಾಗ 60 ಸಾವಿರ ನಗದು, 12 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ಒಂದು ಜೊತೆ ಬೆಳ್ಳಿ ಕಾಲುಂಗರ ಕಳ್ಳತನವಾಗಿರುವುದು ತಿಳಿದುಬಂತು. ಜೊತೆಗೆ ಕಳ್ಳ ಕ್ಷಮಾಪಣಾ ಪತ್ರವನ್ನು ಸಹ ಬರೆದಿದ್ದಾನೆ. ಕದ್ದ ವಸ್ತುಗಳನ್ನು ಇನ್ನೊಂದೇ ತಿಂಗಳಲ್ಲಿ ಮರಳಿ ನೀಡುತ್ತೇನೆ. ನಮ್ಮ ಮನೆಯಲ್ಲಿ ಆಪ್ತರೊಬ್ಬರಿಗೆ ಆರೋಗ್ಯ ಸರಿಯಿಲ್ಲದ ಕಾರಣದಿಂದ ಈ ಕೆಲಸ ಮಾಡುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾನೆ ಎನ್ನಲಾಗಿದೆ.
ಇನ್ನೂ ಕಳ್ಳತನದ ಮಾಹಿತಿ ದೊರೆತ ಕೂಡಲೇ ಪೊಲೀಸರು ಸೆಲ್ವಿನ್ ಮನೆಗೆ ಬಂದು ಶೋಧ ಮಾಡಿದ್ದಾರೆ. ಈ ವೇಳೆ ಕಳ್ಳ ಬರೆದ ಕ್ಷಮಾಪಣಾ ಪತ್ರ ಸಹ ದೊರೆತಿದೆ. ಆತ ಪತ್ರದಲ್ಲಿ ನನ್ನನ್ನು ಕ್ಷಮಿಸಿ, ನಾನು ಕದ್ದ ವಸ್ತುಗಳನ್ನು ಒಂದು ತಿಂಗಳಲ್ಲಿ ವಾಪಸ್ ನೀಡುತ್ತೇನೆ. ನಮ್ಮ ಮನೆಯ ಸದಸ್ಯರೊಬ್ಬರಿಗೆ ಆರೋಗ್ಯ ಸಮಸ್ಯೆಯಿದೆ ಆದ್ದರಿಂದಲೇ ಈ ಕೃತ್ಯ ಮಾಡಿದ್ದಾಗಿ ಪತ್ರದಲ್ಲಿ ಬರೆದಿದ್ದಾನೆ. ಇನ್ನೂ ಈ ಪತ್ರವನ್ನು ಆತ ತಮಿಳು ಭಾಷೆಯಲ್ಲಿ ಬರೆದಿದ್ದು, ಯಾರೋ ಸ್ಥಳೀಯ ವ್ಯಕ್ತಿಯೇ ಈ ಕೃತ್ಯವೆಸಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ಕೇಳಿದ ಅನೇಕರು ಇಂತಹ ಒಳ್ಳೆಯ ಕಳ್ಳರು ಸಹ ಇರುತ್ತಾರಾ ಎಂದು ಶಾಕ್ ಆಗಿದ್ದಾರೆ ಎನ್ನಲಾಗಿದೆ.