KDP meeting ಗುಡಿಬಂಡೆ: ತಾಲೂಕು ಮಟ್ಟದ ಅಧಿಕಾರಿಗಳು ಕೆಡಿಪಿ ಸಭೆಗೆ (KDP meeting)ಸರಿಯಾದ ಪ್ರಗತಿ ವರದಿಯನ್ನು ತರಬೇಕು, ಸಭೆಗೂ ಮೂರು ದಿನಗಳ ಮುಂಚೆಯೇ ವರದಿಯನ್ನು ನನಗೆ ನೀಡಬೇಕು ಎಂದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಸರಿಪಡಿಸುವಂತೆ ಶಾಸಕ ಸುಬ್ಬಾರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶಾಸಕ ಸುಬ್ಬಾರೆಡ್ಡಿ (S N Subbareddy) ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಸಭೆಯಲ್ಲಿ ಕೆಲವು ಇಲಾಖೆಗಳ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಪ್ರಗತಿ ವರದಿಯನ್ನು ಸಲ್ಲಿಸದ ಕಾರಣ ಅಧಿಕಾರಿಗಳ ವಿರುದ್ದ ಶಾಸಕರು ಗರಂ ಆದರು. ಈ ವೇಳೆ ಅಧಿಕಾರಿಗಳು ಮುಂದಿನ ಕೆಡಿಪಿ ಸಭೆಗೆ ಸರಿಯಾದ ಮಾಹಿತಿಯೊಂದಿಗೆ ಬರಬೇಕು, ಇಲ್ಲವಾದಲ್ಲಿ ಸಭೆಯಿಂದ ಹೊರ ಕಳುಹಿಸುತ್ತೇನೆ. ಜೊತೆಗೆ ಕೆಲವೊಂದು ಇಲಾಖೆಗಳು ಸಭೆಗೆ ಬರುವುದಿಲ್ಲ. ಮೀನುಗಾರಿಕೆ, ಕಾರ್ಮಿಕ ಇಲಾಖೆ ಹಾಗೂ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಸಭೆಗೆ ಬರುತ್ತಿಲ್ಲ. ಅವರಿಗೆ ಮುಂದಿನ ಸಭೆಗೆ ಕಡ್ಡಾಯವಾಗಿ ಬರುವಂತೆ ನೊಟೀಸ್ ನೀಡಲು ತಾ.ಪಂ. ಇಒ ಹೇಮಾವತಿ ರವರಿಗೆ ಸೂಚನೆ ನೀಡಿದರು.
ಬಳಿಕ ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ, ಹಿಂದಿನ ವರ್ಷ ಮಳೆ ಕೊರತೆಯಿಂದ ಮುಂಗಾರು ಬೆಳೆಗಳು ಕೈಕೊಟ್ಟರು ಸಹ ರೈತರಿಗೆ ಬೆಳೆ ವಿಮೆಯ ಹಣ ಕೈತಪ್ಪಲು ಕಾರಣರಾದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿಮಾ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಲು ವಕೀಲರೊಂದಿಗೆ ಚರ್ಚಿಸಿ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ ಪ್ರಕರಣ ದಾಖಲಿಸಲು ಯೋಚಿಸುತ್ತಿದ್ದೇವೆ. ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿಮಾ ಕಂಪನಿಗಳ ನಿರ್ಲಕ್ಷದಿಂದ ಕೆಲ ರೈತರಿಗೆ ವಿಮೆ ಹಣ ಸಿಕ್ಕಿಲ್ಲ ಹಾಗಾಗಿ ರೈತರಿಗೆ ಮೋಸ ಆಗಿದ್ದು, ರೈತರಿಗೆ ವಿಮಾ ಕಂಪನಿಗಳ ಮೇಲೆ ನಂಬಿಕೆಯೇ ಇಲ್ಲದಂತಾಗಿದ್ದು ಈ ಬಾರಿ ಬೆಳೆ ವಿಮೆ ಕಟ್ಟಿ ಎಂದರೆ ರೈತರು ಯಾವ ನಂಬಿಕೆ ಮೇಲೆ ವಿಮೆ ಹಣ ಕಟ್ಟುತ್ತಾರೆ ಎಂದು ಆಕ್ರೋಷ ಹೊರಹಾಕಿದರು.

ತಾಲೂಕು ವ್ಯಾಪ್ತಿಯ ಹಲವು ನರ್ಸರಿಗಳಲ್ಲಿ ರೈತರಿಗೆ ಕಳಪೆ ಬಿತ್ತನೆ ಬೀಜಗಳನ್ನು ವಿತರಣೆ ಮಾಡುತ್ತಿದ್ದು, ಬೆಳೆ ಆಗದೇ ಲಕ್ಷಾಂತರ ರೂಪಾಯಿ ಬಂಡವಾಳ ಕೈ ಸುಟ್ಟುಕೊಂಡಿದ್ದು, ಕಳಪೆ ಬೀಜ ಹಾಗೂ ಸಸಿ ವಿತರಿಸಿದ ನರ್ಸರಿ ಮಾಲೀಕರು, ಬಿತ್ತನೆ ಬೀಜಗಳ ಮಾರಾಟ ಮಳಿಗೆಗಳ ಮೇಲೆ ಕ್ರಮ ಜರುಗಿಸುವಂತೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕು ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಗಳ ಕೊರತೆ ಕುರಿತು ಮಾಹಿತಿ ಪಡೆದ ಅವರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿ, ರಿಪೇರಿ ಆಗಿರುವ ಆಂಬುಲೆನ್ಸ್ ಗಳನ್ನು ಸುಸ್ಥಿತಿಗೆ ತರಲು ಬೇಕಾದ ಅನುದಾನ ಕೂಡಲೇ ಬಿಡುಗಡೆ ಗೊಳಿಸುವ ಆಶ್ವಾಸನೆ ನೀಡಿದರು, ಅರೋಗ್ಯ ಇಲಾಖೆಯ ವತಿಯಿಂದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಹಮ್ಮಿಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಮನೆ ಕಳೆದುಕೊಂಡವರಿಗೆ ನಿವೇಶನ ವಿತರಣೆ, ಶುದ್ಧ ಕುಡಿಯುವ ನೀರು ಹಂಚಿಕೆ, ಬೀದಿ ದೀಪಗಳ ನಿರ್ವಹಣೆ, ರಾಜ ಕಾಲುವೆಗಳ ಒತ್ತುವರಿ ಚರಂಡಿಗಳ ಸ್ವಚ್ಛತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಸಿಒ ರವರಿಗೆ ಸೂಚಿಸಿದರು. ಈ ವೇಳೆ ತಹಸೀಲ್ದಾರ್ ಎನ್.ಮನಿಷಾ, ತಾ.ಪಂ ಇಒ ಹೇಮಾವತಿ, ನಾಮ ನಿರ್ದೇಶಿತ ಸದಸ್ಯರಾದ ಲಕ್ಷ್ಮೀನಾರಾಯಣ, ಬೈರಾರೆಡ್ಡಿ, ಗಂಗರಾಜು, ರಿಯಾಜ್ ಪಾಷ, ಇಂದಿರಾ, ಗುರುಮೂರ್ತಿ ಸೇರಿದಂತೆ ತಾಲೂಕಿನ ವ್ಯಾಪ್ತಿಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.