Soldiers – ದೇಶಕ್ಕಾಗಿ ಪ್ರಾಣ ತೆತ್ತ ವೀರಯೋಧರಿಗೆ ನುಡಿ ನಮನ ಸಲ್ಲಿಸುವ ಮತ್ತು ಸೈನಿಕರ ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಗುಡಿಬಂಡೆ ಪಟ್ಟಣದ ಸರ್ಕಾರಿ ಐಟಿಐ ಕಾಲೇಜಿನಲ್ಲಿ “ನಮ್ಮ ಸೇನೆ ನಮ್ಮ ಹೆಮ್ಮೆ” ಅಭಿಯಾನಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು. ವಿಶೇಷವಾಗಿ, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಶತ್ರುಗಳ ದಾಳಿಯನ್ನು ದಿಟ್ಟತನದಿಂದ ಹಿಮ್ಮೆಟ್ಟಿಸಿ ಹುತಾತ್ಮರಾದ ಈ ಗಡಿಭಾಗದ ವೀರಪುತ್ರ ಯೋಧ ಮುರಳಿನಾಯಕ್ ಸೇರಿದಂತೆ ಎಲ್ಲ ಹುತಾತ್ಮ ಯೋಧರಿಗೆ ಈ ಸಂದರ್ಭದಲ್ಲಿ ಗೌರವ ಸಲ್ಲಿಸಲಾಯಿತು.
Soldiers – ಯೋಧರ ತ್ಯಾಗಕ್ಕೆ ಗೌರವ ನಮನ: ಅಭಿಯಾನದ ಮೊದಲ ಹೆಜ್ಜೆ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮತ್ತು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಮಾಜಿ ಯೋಧರು, ಗಣ್ಯರು, ಅಧಿಕಾರಿಗಳು, ಶಿಕ್ಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಸಾಕ್ಷಿಯಾದರು. ಹುತಾತ್ಮ ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇಡೀ ಸಭಾಂಗಣ “ಭಾರತ್ ಮಾತಾಕಿ ಜೈ” ಎಂಬ ಘೋಷಣೆಯಿಂದ ಮೊಳಗಿತು.
Read this also : ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಶ್ರಮಿಶೋಣ: ಅನುರಾಧ ಆನಂದ್….!
Soldiers – ದೇಶಸೇವೆ ನಮ್ಮೆಲ್ಲರ ಆದ್ಯತೆ: ಮಾಜಿ ಯೋಧ ಅಮರನಾಥಬಾಬು
ಕಾರ್ಯಕ್ರಮದಲ್ಲಿ ಮಾತನಾಡಿದ ಗುಡಿಬಂಡೆ-ಬಾಗೇಪಲ್ಲಿ ಜಂಟಿ ತಾಲ್ಲೂಕು ಮಾಜಿ ಯೋಧರ ಸಂಘದ ಅಧ್ಯಕ್ಷ ಹಾಗೂ ಮಾಜಿ ಯೋಧ ಅಮರನಾಥಬಾಬು ಅವರು, “ಸರ್ಕಾರಿ ಶಾಲೆಯಲ್ಲಿ ಓದಿ, 60ರ ದಶಕದಲ್ಲಿ ಸೇನೆ ಸೇರಿ ದೇಶಸೇವೆ ಮಾಡುವ ಸೌಭಾಗ್ಯ ನನಗಿದು ಸಿಕ್ಕಿದ್ದು ನಿಜಕ್ಕೂ ಹೆಮ್ಮೆಯ ವಿಷಯ. ನಮ್ಮ ಯೋಧರು ಸ್ವದೇಶಿ ತಂತ್ರಜ್ಞಾನದ ಅಸಾಮಾನ್ಯ ಆಯುಧಗಳನ್ನು ಬಳಸಿ ಶತ್ರು ರಾಷ್ಟ್ರದ ವಿರುದ್ಧ ಇತ್ತೀಚೆಗೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೀಕ್ಷಿಸುತ್ತಿದ್ದರೆ ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಹಿಂದೆ ನಮ್ಮ ಮೇಲೆ ಕಲ್ಲು ಎಸೆಯುತ್ತಿದ್ದ ಸ್ಥಳಗಳಲ್ಲಿ ಇಂದು ನಮ್ಮ ಯೋಧರು ಶತ್ರುಗಳಿಗೆ ನರಕ ದರ್ಶನ ಮಾಡಿಸುವ ಧೈರ್ಯ ತೋರುತ್ತಿದ್ದಾರೆ. ವಿದ್ಯಾರ್ಥಿಗಳು ರಾಷ್ಟ್ರಪ್ರೇಮವನ್ನು ತಮ್ಮ ಜೀವನದ ತಳಹದಿಯನ್ನಾಗಿಟ್ಟುಕೊಂಡು ಸಾಗಬೇಕು. ದೇಶಕ್ಕಾಗಿ ಸೇವೆ ಸಲ್ಲಿಸಲು ನನಗೆ ಮತ್ತೊಂದು ಅವಕಾಶ ಸಿಕ್ಕರೆ, ಮತ್ತೆ ಸೈನ್ಯಕ್ಕೆ ಮರಳಲು ನಾನು ಸಿದ್ಧನಿದ್ದೇನೆ” ಎಂದು ಹೇಳಿದರು.
Soldiers – ನಮ್ಮ ದೇಶದ ಸಾರ್ವಭೌಮತ್ವ ಅಚಲ: ಅನುರಾಧ ಆನಂದ್
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಅಧ್ಯಕ್ಷೆ ಅನುರಾಧ ಆನಂದ್ ಮಾತನಾಡಿ, “ನಮ್ಮ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಯಾವುದೇ ದುಷ್ಟಶಕ್ತಿಗಳನ್ನು ನಾವು ಸಹಿಸಿಕೊಳ್ಳುವುದಿಲ್ಲ ಎಂಬ ನಮ್ಮ ರಾಷ್ಟ್ರ ನಾಯಕರ ಮಾತು ಸತ್ಯ. ನಮ್ಮ ತ್ರಿವಳಿ ಸೈನ್ಯಗಳ ವೀರಯೋಧರ ಪ್ರತ್ಯುತ್ತರಕ್ಕೆ ಶತ್ರುಗಳು ಪತನಗೊಂಡಿದ್ದಾರೆ. ಇಡೀ ವಿಶ್ವದಲ್ಲಿ ನಾವು ಸುಖಮಯ ಸಾಮರಸ್ಯದ ಜೀವನ ನಡೆಸಲು ಪ್ರಮುಖ ಕಾರಣ, ತಮ್ಮ ಸರ್ವವನ್ನೂ ತ್ಯಾಗ ಮಾಡಿ ಸದಾ ಗಡಿ ಕಾಯುತ್ತಿರುವ ಯೋಧರು. ನಮ್ಮ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ಸಲುವಾಗಿ ‘ನಮ್ಮ ಸೇನೆ ನಮ್ಮ ಹೆಮ್ಮೆ’ ಅಭಿಯಾನವನ್ನು ತಾಲ್ಲೂಕಿನಾದ್ಯಂತ ವಿವಿಧ ಕಾರ್ಯಕ್ರಮಗಳ ಮೂಲಕ ನಡೆಸಲು ಉದ್ದೇಶಿಸಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ವಿಕಾಸ್ ಸಂಸ್ಥೆಯ ಮುಖ್ಯಸ್ಥ ಶ್ರೀಧರ್ ಸಾಗರ್ ಜೀ, ಸರ್ಕಾರಿ ಐಟಿಐ ಕಿರಿಯ ತರಬೇತಿ ಅಧಿಕಾರಿಗಳಾದ ಸ.ನ.ನಾಗೇಂದ್ರ, ರಂಗಸ್ವಾಮಿ, ರಮೇಶ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಗೌರವಾಧ್ಯಕ್ಷ ಜಿ.ವಿ.ಆನಂದ್, ವಿಶ್ವ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ವಿಶ್ವ ಚಲಪತಿ, ಕಸಾಪ ಮುಖಂಡ ಶ್ರೀನಿವಾಸಗಾಂಧಿ, ತಾಲ್ಲೂಕು ಅಭಾಸಾಪ ಕಾರ್ಯದರ್ಶಿ ಅನಿತಾ ಚಂದ್ರಶೇಖರ್, ಪದಾಧಿಕಾರಿಗಳಾದ ಮಹಾಲಕ್ಷ್ಮೀ ಸತೀಶ್, ಮಂಜುಳಾ ತಿಮ್ಮಾರೆಡ್ಡಿ, ಸುಶ್ಮಾ, ಇಂದಿರಾ ರಮೇಶ್, ಶಾಂತಲಾ ಅಶೋಕ್, ಅಸ್ಮಿಯಾ, ವೆಂಕಟಾಚಲಪತಿ, ಮಧು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.