Mumbai – ಕೆಲವರು ಕೆಲಸ ಮಾಡೋಕೆ ಆಗದೇ ಕಳ್ಳತನ ಮಾಡುವ ಅಡ್ಡದಾರಿಯನ್ನು ಹಿಡಿದಿರುತ್ತಾರೆ. ಯಾರೂ ಇಲ್ಲದ ವೇಳೆ ಅಥವಾ ರಾತ್ರಿ ಸಮಯದಲ್ಲಿ (ಕೆಲವೊಮ್ಮೆ ಹಗಲಲ್ಲೆ ಕಳ್ಳತನ ನಡೆದ ಘಟನೆಗಳೂ ನಡೆದಿದ ಬಗ್ಗೆ ಕೇಳಿರುತ್ತೇವೆ) ಕಳ್ಳತನ ಮಾಡಿ ಪರಾರಿಯಾಗಿರುತ್ತಾರೆ. ಆದರೆ ಇಲ್ಲೊಬ್ಬ ಕಳ್ಳ ಕಳ್ಳತನ ಮಾಡಲು ಮನೆಯೊಂದಕ್ಕೆ ನುಗ್ಗಿದ್ದಾನೆ. ಮನೆಯಲ್ಲಿ ಕಳ್ಳತನ ಮಾಡೋಕೆ ಏನೂ ವಸ್ತುಗಳು ಸಿಗದೇ ಇದ್ದ ಕಾರಣ ಮನೆಯ ಯಜಮಾನಿಗೆ ಕಿಸ್ ಕೊಟ್ಟು ಪರಾರಿಯಾಗಿದ್ದಾನೆ. ಅಂದಹಾಗೆ ಈ ವಿಚಿತ್ರ ಘಟನೆ ಮುಂಬೈನ ಮಲಾಡ್ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಹೇಳಲಾಗಿದೆ.
ಕಳೆದ ಜ.3 ರಂದು ಕಳ್ಳನೋರ್ವ ಮನೆಯಲ್ಲಿ ಮಹಿಳೆ ಒಬ್ಬಳೇ ಇರುವುದನ್ನು ಗಮನಿಸಿ ಕಳ್ಳತನ ಮಾಡಲು ಮನೆಗೆ ನುಗ್ಗಿದ್ದಾನೆ. ಮನೆಯೊಳಗೆ ನುಗ್ಗಿದ ಕಳ್ಳ ಒಳಗಿನಿಂದ ಬಾಗಿಲನ್ನು ಲಾಕ್ ಮಾಡಿದ್ದಾನೆ. ಮನೆಯಲ್ಲಿದ್ದ ಮಹಿಳೆಯನ್ನು ನೋಡಿದ ಕೂಡಲೇ ಕಳ್ಳ ಆಕೆಯ ಬಾಯಿಯನ್ನು ಮುಚ್ಚಿದ್ದಾನೆ. ನಂತರ ಮನೆಯಲ್ಲಿರುವ ಮೊಬೈಲ್ ಪೋನ್, ಎಟಿಎಂ ಕಾರ್ಡ್, ಬೆಲೆಬಾಳುವ ವಸ್ತುಗಳನ್ನು ನೀಡುವಂತೆ ಕೇಳಿಕೊಂಡಿದ್ದಾನೆ. ಈ ವೇಳೆ ಆ ಮಹಿಳೆ ನನ್ನ ಬಳಿ ಯಾವುದೇ ಬೆಲೆಬಾಳುವಂತಹ ವಸ್ತುಗಳು ಇಲ್ಲ ದಯವಿಟ್ಟು ಬಿಟ್ಟುಬಿಡು ಎಂದು ಹೇಳಿದ್ದಾಳೆ. ಇದನ್ನು ಕೇಳಿಸಿಕೊಂಡ ಆರೋಪಿ ಕಳ್ಳ ಆಕೆಯನ್ನು ಮುತ್ತಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಇನ್ನೂ ಈ ಸಂಬಂಧ ಮಹಿಳೆ ಕುರಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ಆರೋಪಿಯ ಮೇಲೆ ಇದಕ್ಕೂ ಮುಂಚೆ ಯಾವುದೇ ಕ್ರಿಮಿನಲ್ ದಾಖಲೆಯಿಲ್ಲ. ಸದ್ಯ ಅದೇ ಕಾಲೋನಿಯಲ್ಲಿಯೇ ಆರೋಪಿ ಕುಟುಂಬಸ್ಥರೊಂದಿಗೆ ವಾಸ ಮಾಡುತ್ತಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.