JDS Membership – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸಲು ಬೂತ್ ಮಟ್ಟದಿಂದಲೇ ಶ್ರಮಿಸುತ್ತೇವೆ. ಈ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಜೆಡಿಎಸ್ ಪಕ್ಷದ ವತಿಯಿಂದ ಸದಸ್ಯತ್ವ ನೊಂದಣಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮುಕ್ತಿ ಮುನಿಯಪ್ಪ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸದಸ್ಯತ್ವ ನೊಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗುಡಿಬಂಡೆಯಲ್ಲಿ ಜೆಡಿಎಸ್ ಪಕ್ಷ ತುಂಬಾ ಬಲಿಷ್ಟವಾಗಿದೆ. ನಮ್ಮ ಪಕ್ಷ ಪ್ರಾದೇಶಿಕ ಪಕ್ಷವಾಗಿದ್ದು, ಜನರು ಪಕ್ಷದ ಮೇಲೆ ಒಲವು ಹೊಂದಿದ್ದಾರೆ. ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಿಂದ ಸದಸ್ಯತ್ವ ನೊಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮಪಕ್ಷದ ಎಲ್ಲಾ ಮುಖಂಡರು ಬೂತ್ ಮಟ್ಟದಿಂದ ಜೆಡಿಎಸ್ ಪಕ್ಷದ ನೊಂದಣಿಯನ್ನು ಮಾಡಿಸಬೇಕು. ಆ ಮೂಲಕ ಪಕ್ಷದ ಬಲವನ್ನು ವೃದ್ದಿಸಬೇಕೆಂದರು.
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಕುಮಾರಸ್ವಾಮಿಯವರಿಗೆ ಗುಡಿಬಂಡೆ ತಾಲೂಕಿನ ಮೇಲೆ ಬಹಳಷ್ಟು ಪ್ರೀತಿಯಿದೆ. ಈ ಭಾಗದಲ್ಲಿ ಏನಾದರೂ ಕೆಲಸಗಳು ಕೈಗೊಳ್ಳಲು ಏನಾದರೂ ಸಮಸ್ಯೆಯಿದ್ದರೇ ನನ್ನ ಗಮನಕ್ಕೆ ತಂದರೇ ನಾನು ಕುಮಾರಸ್ವಾಮಿಯವರಿಗೆ ತಿಳಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲು ಮನವಿ ಮಾಡುತ್ತೇನೆ. ಜೊತೆಗೆ ನಮ್ಮ ಮೈತ್ರಿ ಪಕ್ಷದ ಸಂಸದರಾದ ಡಾ.ಕೆ.ಸುಧಾಕರ್ ರವರೂ ಸಹ ನಮ್ಮೊಂದಿಗೆ ಇದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಮೈತ್ರಿಯ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಚ್ಚು ಜನಪ್ರತಿನಿಧಿಗಳು ಆಯ್ಕೆಯಾಗುವಂತೆ ಮಾಡುತ್ತೇವೆ. ಜೊತೆಗೆ ಶೀಘ್ರದಲ್ಲೇ ತಾಲೂಕು ಘಟಕವನ್ನೂ ಸಹ ಆಯ್ಕೆ ಮಾಡಲಾಗುತ್ತದೆ ಎಂದರು.
ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಎಚ್.ಎನ್. ಮಂಜುನಾಥ ರೆಡ್ಡಿ ಮಾತನಾಡಿ, ತಾಲೂಕಿನಲ್ಲಿ ಅಧಿಕಾರಿಗಳು, ಪೊಲೀಸ್ ಸೇರಿದಂತೆ ಇತರ ಇಲಾಖೆಯವರು ಆಡಳಿತ ಪಕ್ಷಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ನಮ್ಮ ಪಕ್ಷದ ಸಮಸ್ಯೆಗಳನ್ನು ಕೇಳುವವರು ಇಲ್ಲ, ನಮ್ಮ ಕೆಲಸಗಳ ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ. ಅದೇ ಗುಡಿಬಂಡೆ ತಾಲ್ಲೂಕಿನ ಜೆಡಿಎಸ್ ಪಕ್ಷದ ಕಾರ್ಯಕರ್ತರು ಒಂದಾಗಿ 10-15 ಜನ ಹೋದರೆ ನಮ್ಮ ಕೆಲಸ ಖಂಡಿತವಾಗಿ ಆಗುತ್ತದೆ. ನಮ್ಮ ಪಕ್ಷದ ಯಾವುದೇ ಕಾರ್ಯಕರ್ತರಿಗೆ ತೊಂದರೆ ಸಮಸ್ಯೆ ಆದಾಗ ಎಲ್ಲಾ ಒಟ್ಟಾಗಿ ಸೇರಿದರೆ ಅಧಿಕಾರಿಗಳಿಗೂ ತಿಳಿಯುತ್ತದೆ ಇಲ್ಲಿ ಜೆಡಿಎಸ್ ಬಲವಾಗಿದೆ ಎಂದು. ಇದರ ಜೊತೆಗೆ ನಮಗೆ ಹೈ ಕಮಾಂಡ್ ಸಹ ಸಹಕಾರ ನೀಡಬೇಕೆಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಜೆಡಿಎಸ್ ಪಕ್ಷದ ತಾಲೂಕು ಕಾರ್ಯಧ್ಯಕ್ಷ ಜಿ.ಎಲ್. ಮುರಳಿಕೃಷ್ಣ, ತಾಲೂಕು ಕಾರ್ಯದರ್ಶಿ ಅಪ್ಸರ ಭಾಷಾ, ರಾಜ್ಯ ಸಮಿತಿ ಸದಸ್ಯ ಜೀವಿ ಆನಂದ್, ಜಂಟಿ ರಾಜ್ಯ ಸದಸ್ಯರು ರಾಜಣ್ಣ, ಹಿಂದುಳಿದ ವರ್ಗದ ತಾಲೂಕು ಅಧ್ಯಕ್ಷರು ಶ್ರೀನಿವಾಸ್ ಗಾಂಧಿ, ಪಟ್ಟಣ ಪಂಚಾಯತಿಯ ಸದಸ್ಯ ಬಶೀರ್ ಅಹ್ಮದ್, ರಾಜ್ಯ ವಿಭಾಗದ ಉಪಾಧ್ಯಕ್ಷ ಎ. ವೆಂಕಟರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಯರ್ರಲಕ್ಕೇನಹಳ್ಳಿ ವೆಂಕಟ ರೆಡ್ಡಿ, ಜಗನ್ನಾಥ್, ಪೂಜಾರಿ ಮಹೇಶ್, ಸುರೇಶ್ ಸೇರಿದಂತೆ ಜನತಾದಳ ಪಕ್ಷದ ಮುಖಂಡರು ಭಾಗವಹಿಸಿದ್ದರು.