ಗುಡಿಬಂಡೆ: ತಾಲೂಕಿನ ಪೆಮ್ಮನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ನಂಜಮ್ಮ ರವರು ವಯೋನಿವೃತ್ತಿಗೊಂಡಿದ್ದು, ಅವರನ್ನು ಸರ್ಕಾರಿ ನೌಕರರ ಸಂಘ, ಶಿಕ್ಷಕರು ಹಾಗೂ ಗ್ರಾಮಸ್ಥರು ಆತ್ಮೀಯವಾಗಿ ಬೀಲ್ಕೊಟ್ಟರು. ಈ ವೇಳೆ ಅಂಗನವಾಡಿ ಕೇಂದ್ರ ಮಕ್ಕಳು ಹಾಗೂ ಕೆಲ ಜನರು ಭಾವುಕರಾದರು.
ಈ ವೇಳೆ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ಮಾತನಾಡಿ, ನಂಜಮ್ಮ ರವರು ಸುಮಾರು ವರ್ಷಗಳಿಂದ ಪೆಮ್ಮನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಸರ್ಕಾರಿ ಕೆಲಸ ಎಂದ ಕೂಡಲೇ ನಿವೃತ್ತಿ ಎಂಬುದು ಸಾಮಾನ್ಯವಾಗಿರುತ್ತದೆ. ಅದರಂತೆ ಅವರು ತಮ್ಮ ಸೇವೆಯಿಂದ ಇಂದು ನಿವೃತ್ತಿಯಾಗಿದ್ದಾರೆ. ಅವರ ಸೇವಾವಧಿಯಲ್ಲಿ ಅಂಗನವಾಡಿ ಕೇಂದ್ರದ ಮಕ್ಕಳ ಅಭಿವೃದ್ದಿಗಾಗಿ ಶ್ರಮಿಸಿದ್ದಾರೆ. ಜೊತೆಗೆ ಕೇಂದ್ರದ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಂಡಿದ್ದಾರೆ. ಅವರ ನಿವೃತ್ತಿ ಜೀವನ ಸುಖಮಯ ಹಾಗೂ ಆರೋಗ್ಯಕರವಾಗಿರಲಿ ಎಂದು ಶುಭ ಕೋರಿದರು.
ಬಳಿಕ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಂಯೋಜಕಿ ಗಂಗರತ್ನಮ್ಮ ಮಾತನಾಡಿ, ನಂಜಮ್ಮ ರವರು ತುಂಬಾ ಸರಳ ಹಾಗೂ ಸಜ್ಜನಿಕೆ ವ್ಯಕ್ತಿತ್ವ ಉಳ್ಳವರಾಗಿದ್ದಾರೆ. ಅಂಗನವಾಡಿ ಕೇಂದ್ರಕ್ಕೆ ಬರುವಂತಹ ಅನೇಕ ಮಕ್ಕಳು ಅವರನ್ನು ಅಮ್ಮಾ ಅಂತಲೇ ಕರೆಯುತ್ತಾರೆ. ಜೊತೆಗೆ ಗ್ರಾಮದಲ್ಲೂ ಸಹ ಮಕ್ಕಳ ಪೋಷಕರೊಂದಿಗೆ ಒಳ್ಳೆಯ ನಡತೆಯಿಂದ ನಡೆದುಕೊಂಡಿದ್ದಾರೆ. ಇಂದು ಅವರು ವಯೋನಿವೃತ್ತಿ ಮಕ್ಕಳಿಗೆ ತುಂಬಲಾರದ ನೋವು ತಂದುಕೊಟ್ಟಿದೆ. ಅವರು ಅಂಗನವಾಡಿ ಕೇಂದ್ರವನ್ನು ತುಂಬಾ ಆಕರ್ಷಕ ರೀತಿಯಲ್ಲಿ ಸಿಂಗರಿಸಿದ್ದಾರೆ. ಮಕ್ಕಳ ಕಲಿಕೆಯಲ್ಲಿ ತುಂಬಾನೆ ಶ್ರಮ ವಹಿಸಿದ್ದಾರೆ. ಅವರು ಅನೇಕ ಅಂಗನವಾಡಿ ಶಿಕ್ಷಕರಿಗೆ ನಂಜಮ್ಮ ರವರು ಮಾದರಿಯಾಗಿದ್ದಾರೆ ಎಂದರು.
ಈ ಸಮಯದಲ್ಲಿ ಸೋಮೇನಹಳ್ಳಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಾಗಲಿಂಗಪ್ಪ, ಶಿಕ್ಷಕ ರಾಜಶೇಖರ್ ಸೇರಿದಂತೆ ಹಲವು ಶಿಕ್ಷಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.