ಗುಡಿಬಂಡೆ: ಕರ್ನಾಟಕ ಎಂದು ನಾಮಕರಣಗೊಂಡ 50 ವರ್ಷಗಳ ಸವಿ ಸವಿನೆನಪಿಗಾಗಿ ರಾಜ್ಯ ಸರ್ಕಾರವು ಭುವನೇಶ್ವರಿ ತಾಯಿಯ (Kannada Jyothi Ratha) ಜ್ಯೋತಿ ರಥಯಾತ್ರೆಯ ಮೂಲಕ ಕನ್ನಡ ನಾಡಿನ ಹಿರಿಮೆ, ಗರಿಮೆಯನ್ನು ಪ್ರತಿ ಗ್ರಾಮಕ್ಕೂ ತಲುಪಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ತಹಸೀಲ್ದಾರ್ ಎನ್. ಮನಿಷಾ ತಿಳಿಸಿದರು.
ತಾಲೂಕಿಗೆ ಆಗಮಿಸಿದ ’ಕರ್ನಾಟಕ ಸಂಭ್ರಮ-50’ ರ ಕನ್ನಡ ಜ್ಯೋತಿ ರಥಯಾತ್ರೆಗೆ (Kannada Jyothi Ratha) ಶುಕ್ರವಾರ ಬೆಳಿಗ್ಗೆ ತಹಸೀಲ್ದಾರ್ ಮನಿಷಾ ಹಾಗೂ ತಾಪಂ ಇಒ ಹೇಮಾವತಿ ಅವರು ರಥದಲ್ಲಿರುವ ನಾಡ ದೇವತೆ ತಾಯಿ ಭುವನೇಶ್ವರಿಗೆ ಮಾಲಾರ್ಪಣೆ ಮಾಡಿ, ಆರತಿ ಬೆಳಗಿದರು. ಕಂದಾಯ ಇಲಾಖೆ ಹಾಗೂ ತಾಪಂ ಇಲಾಖೆಯ ಮಹಿಳಾ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಪೂರ್ಣ ಕುಂಭದೊಂದಿಗೆ ರಥಯಾತ್ರೆಯನ್ನು ಅದ್ದೂರಿಯಾಗಿ ತಾಲೂಕಿಗೆ ಬರಮಾಡಿಕೊಂಡು ಮಾತನಾಡಿದರು. 1973ರಲ್ಲಿ ಡಿ.ದೇವರಾಜ ಅರಸು ಅವರು ಮೈಸೂರು ರಾಜ್ಯವನ್ನು ವಿಶಾಲಾರ್ಥದಲ್ಲಿ ಕರ್ನಾಟಕ ಮರುನಾಮಕರಣ ಮಾಡಿ 50 ವರ್ಷ ಗತಿಸಿದ ಕಾರಣಕ್ಕಾಗಿ ನಮ್ಮ ಸರ್ಕಾರ ಇಡೀ ವರ್ಷ ನಾಡು-ನುಡಿ ಕುರಿತು ಯುವ ಪೀಳಿಗೆಗೆ ಪರಿಚಯಿಸಲು ಈ ರಥ ಯಾತ್ರೆ ಹಮ್ಮಿಕೊಂಡಿದೆ. ಕನ್ನಡ ಕಟ್ಟುವ ಕೆಲಸಕ್ಕೆ ಇಂದಿಲ್ಲಿ ನೆರೆದ ಎಲ್ಲಾ ಕನ್ನಡ ಪ್ರೇಮಿಗಳಿಗೆ ತಾಲೂಕು ಆಡಳಿತದ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದರು.
ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಜಿಲ್ಲಾ ಕಸಾಪ ಅಧ್ಯಕ್ಷ ಪ್ರೋ. ಕೋಡಿರಂಗಪ್ಪ ಮಾತನಾಡಿ ಮೈಸೂರು ರಾಜ್ಯ ಕರ್ನಾಟಕ ಎಂದು (Kannada Jyothi Ratha) ನಾಮಕರಣಗೊಂಡು 50ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ, ಇಡೀ ವರ್ಷ ಕರ್ನಾಟಕದ ಇತಿಹಾಸ, ಕಲೆ, ಸಾಹಿತ ಜ್ಯೋರ್ತಿ ಹಾಗೂ ಕನ್ನಡ ಭಾಷೆ, ನಾಡು,ನುಡಿ, ಜಲ ಅಸ್ಮಿತೆಗಾಗಿ ಸಂಘರ್ಷ, ಹೋರಾಟ ಮಾಡಿದ ನಾಯಕರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಕನ್ನಡ ನೆಲದ ರಕ್ಷಣೆಗೆ ನಿಂತ ಪ್ರತಿಯೊಬ್ಬರನ್ನೂ ನೆನೆಯುದರ ಜೊತೆಗೆ ಯುವ ಸಮುದಾಯಕ್ಕೆ ಹಿಂದಿನ ಇತಿಹಾಸ ತಿಳಿಸಿ ಕೊಡುವ ಪ್ರಯತ್ನ ಮಾಡಬೇಕಾಗಿದೆ. ಇಲ್ಲದಿದ್ದರೆ ಯುವ ಪೀಳಿಗೆಗೆ ಇತಿಹಾಸ ಸೃಷ್ಟಿಸಲು ಆಗುವುದಿಲ್ಲ. ಕನ್ನಡ ಅತ್ಯಂತ ಪ್ರಾಚೀನ ಭಾಷೆಯಾಗಿದೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ತನ್ನದೆ ಆದ ಕಲೆ ಸಂಸ್ಕೃತಿ, ಪರಂಪರೆ ಹೊಂದಿದ್ದು, ನಾಡಿಗಾಗಿ ಪ್ರಾಣ ತ್ಯಾಗ ಮಾಡಿದವರ ಸಹಕಾರದಿಂದ ಕರ್ನಾಟಕ ರೂಪುಗೊಂಡಿದೆ ಎಂಬ ಸಂಗತಿಯನ್ನು ಯುವ ಸಮುದಾಯ ಅರಿತುಕೊಳ್ಳಬೇಕು ಎಂದರು.
ಈ ವೇಳೆ ಶಿಕ್ಷಣ ಇಲಾಖೆಯ ಟಿಪಿಒ ಮುರಳಿ, ಕಸಾಪ ತಾಲೂಕು ಅಧ್ಯಕ್ಷ ಸುಬ್ಬರಾಯಪ್ಪರವರು ಮಾತನಾಡಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನ್ನಡ ಜ್ಯೋತಿ ರಥಯಾತ್ರೆಯು (Kannada Jyothi Ratha) ಸಂಚರಿಸಿತು. ಸಾವಿರಾರು ವಿದ್ಯಾರ್ಥಿಗಳು ಹಾಗೂ ವಿವಿಧ ಕಲಾ ತಂಡಗಳು, ವಾದ್ಯ ಮೇಳಗಳೊಂದಿಗೆ ಕಲಾವಿದರು ಹೆಜ್ಜೆ ಹಾಕಿ, ಮೆರವಣಿಗೆಯನ್ನು ಮೆರಗುಗೊಳಿಸಿದರು. ನಾಡಿನ ಸಂಸ್ಕೃತಿ ಬಿಂಬಿಸುವ ಗಾಯನಕ್ಕೆ ಮಹಿಳೆಯರ ನೃತ್ಯವು ಎಲ್ಲರ ಗಮನ ಸೆಳೆಯಿತು.
ಈ(Kannada Jyothi Ratha) ಕಾರ್ಯಕ್ರಮದಲ್ಲಿ ತಾಪಂ ಇಒ ಹೇಮಾವತಿ, ಪಪಂ ಸಿಒ ಶ್ರೀನಿವಾಸ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರವೀಂದ್ರ, ಬಿಇಒ ಕೃಷ್ಣಪ್ಪ, ಸಿಡಿಪಿಒ ರಫೀಕ್, ಟಿಪಿಒ ಮುರಳಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೇಶವರೆಡ್ಡಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಕಸಾಪ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು, ಸಾರ್ವಜನಿಕರು ಸೇರಿದಂತೆ ಹಲವರು ಹಾಜರಿದ್ದರು.