ಸ್ವಚ್ಛತೆ, ನೈರ್ಮಲ್ಯ, ಕಂದಾಯ ವಸೂಲಿ ಸೇರಿ ಗ್ರಾಮೀಣ ಅಭಿವೃದ್ಧಿಯ ಇತರ ವಲಯಗಳಲ್ಲಿ ಮಹತ್ತರ ಸಾಧನೆ ತೋರಿದ ಗುಡಿಬಂಡೆ ತಾಲೂಕಿನ ಕಸಬಾ ಹೋಬಳಿಯ ಹಂಪಸಂದ್ರ ಗ್ರಾಮ ಪಂಚಾಯಿತಿ, ಪ್ರಸಕ್ತ 2023-24 ನೇ ಸಾಲಿನ ‘ಗಾಂಧಿ ಗ್ರಾಮ ಪುರಸ್ಕಾರ’ (Gandhi Grama Purskara) ಕ್ಕೆ ಆಯ್ಕೆಯಾಗಿದೆ.
ಸ್ಥಳೀಯ ಮಟ್ಟದಲ್ಲಿ ಗ್ರಾ.ಪಂ.ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸ ಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರದಿಂದ ‘ಗಾಂಧಿ ಗ್ರಾಮ ಪುರಸ್ಕಾರ’ ನೀಡಿ ಗೌರವಿಸಲಾಗುತ್ತಿದೆ. ಪುರಸ್ಕೃತ ಗ್ರಾ.ಪಂ ಗಳಿಗೆ ತಲಾ 5 ಲಕ್ಷ ರೂ. ಪ್ರೋತ್ಸಾಹ ಧನ ದೊರೆಯಲಿದ್ದು, ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ. ಗುಡಿಬಂಡೆ ತಾಲೂಕಿನ ಕಸಬಾ ಹೋಬಳಿಯ ಹಂಪಸಂದ್ರ ಗ್ರಾ.ಪಂ ಗೆ ಈ ಬಾರಿ ಗಾಂಧಿ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಹಂಪಸಂದ್ರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಎಲ್ ಇಡಿ, ಹೈಮಾಸ್ಟ್ ಬೀದಿ ದೀಪಗಳನ್ನು ಅಳವಡಿಸಿ ಉತ್ತಮ ಬೆಳಕು ನೀಡಿದ ಖ್ಯಾತಿ ಪಡೆದಿದೆ. ಚೆಂಡೂರು ಗ್ರಾಮದಲ್ಲಿ ಸೋಲಾರ್, ಪ್ರತಿ ವರ್ಷವೂ ಗರಿಷ್ಠ ತೆರಿಗೆ ವಸೂಲಿ ಮಾಡಿದೆ. ವಿವಿಧ ಗ್ರಾಮಗಳಲ್ಲಿ ‘ಸಿಸಿ ರಸ್ತೆ, ಚರಂಡಿ ನಿರ್ಮಾಣ, ಶುದ್ಧ ಕುಡಿಯುವ ನೀರು, ಜನಸ್ನೇಹಿ ಆಡಳಿತ, ವಾರ್ಡ್ ಸಭೆ, ಗ್ರಾಮ ಸಭೆ, ಮಕ್ಕಳ ಸಭೆಗಳ ಮೂಲಕ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನ ಸಾಮಾನ್ಯರಿಗೆ ತಲುಪಿಸುವ ಮೂಲಕ ಸರ್ಕಾರ ನಿಯಮ ಗಳನ್ನು ಚಾಚು ತಪ್ಪದೆ ಗ್ರಾ.ಪಂ ವತಿಯಿಂದ ಪಾಲಿಸಲಾಗಿದೆ.
ಗ್ರಾ.ಪಂ.ಗಳು ಶಾಸನಬದ್ಧ ಕಾರ್ಯಗಳ ಉತ್ತಮ ನಿರ್ವಹಣೆ, ಹಣಕಾಸಿನ ನಿರ್ವಹಣೆ, 15ನೇ ಹಣಕಾಸು ಯೋಜನೆಯಲ್ಲಿ ಬಿಡುಗಡೆಯಾದ ಅನುದಾನದ ಬಳಕೆ, ಜಮಾ ಬಂಧಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 31,493 ದಿನಗಳ ಸೃಜನೆ ಮಾಡಲಾಗಿದೆ. ಮೂಲ ಸೌಕರ್ಯಗಳ ವಿಭಾಗದಲ್ಲಿ ಕುಡಿಯುವ ನೀರು, ಬೀದಿ ದೀಪ, ವಸತಿ ಯೋಜನೆ, ನೈರ್ಮಲೀಕರಣ, ತ್ಯಾಜ್ಯ ನಿರ್ವಹಣೆ, ನಮ್ಮ ಗ್ರಾಮ ಯೋಜನೆ, ಯೋಜನೆಗಳ ಅನುಷ್ಠಾನ, ದಾಖಲಾತಿ ನಿರ್ವಹಣೆ, ತೆರಿಗೆ ವಸೂಲಾತಿ, ಜನಸ್ನೇಹಿ ಪಂಚಾಯಿತಿ ಆಡಳಿತ ವ್ಯವಸ್ಥೆ, ಗ್ರಾಮ ಸಭೆಗಳ ಆಯೋಜನೆ, ಸರ್ಕಾರಿ ಸೇವೆಗಳ ಒದಗಿಸುವಿಕೆ ಸೇರಿ ಇತರ ಸೇವಾ ವಲಯಗಳಲ್ಲಿ ಒಟ್ಟು ಅಂಕಗಳ ಪ್ರಶ್ನಾವಳಿಗೆ ತಾಲೂಕುವಾರು ದಾಖಲಾತಿ ಪರಿಶೀಲಿಸಿ ಅದರ ಆಧಾರದಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸುವ ತಾಲೂಕಿನ ಗ್ರಾ.ಪಂ.ಗಳಲ್ಲಿ ಅತಿ ಹೆಚ್ಚು ಅಂಕ 500ಕ್ಕೆ 396 ಅಂಕ ಪಡೆದ ಹಂಪಸಂದ್ರ ಗ್ರಾಮ ಪಂಚಾಯಿತಿಯನ್ನು ರಾಜ್ಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಕೋಟ್ 1..
ಎಲ್ಲರ ಸಹಕಾರ ದಿಂದಾಗಿ ಉತ್ತಮ ಕೆಲಸ ಮಾಡಲು ಸಾಧ್ಯವಾಗಿದೆ. ಪಂಚಾಯಿತಿಯ 18 ಗ್ರಾಮಗಳ ಜನರು, 21 ಸದಸ್ಯರು, ಅಧ್ಯಕ್ಷ- ಉಪಾಧ್ಯಕ್ಷರು ಸಹಕಾರ ನೀಡಿದ್ದರಿಂದ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ. ಗ್ರಾ.ಪಂ. ಗೆ ಪ್ರಶಸ್ತಿ ಸಿಗಲು ಜನರ ಸಹಕಾರವೇ ಕಾರಣ. – ನರಸಿಂಹಮೂರ್ತಿ, ಪಿಡಿಒ, ಗ್ರಾಪಂ ಹಂಪಸಂದ್ರ, ಗುಡಿಬಂಡೆ.
ಕೋಟ್ 2…
ಗ್ರಾಪಂ ಸಿಬ್ಬಂದಿ, ಪ್ರಸಕ್ತ ಸಾಲಿನಲ್ಲಿ ನರೇಗಾದ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ, ವೈಯಕ್ತಿಕ ಆರೋಗ್ಯ ಅರಿವು ಹಾಗೂ ಸ್ವ ಸಹಾಯ ಸಂಘದ ಸದಸ್ಯರ ಗುಂಪುಗಳು ಸೇರಿದಂತೆ ನಾನಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಈ ಹಿಂದೆ ಆಡಳಿತ ನಡೆಸಿರುವ ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು ಹಾಗೂ ಗ್ರಾಪಂ ಸದಸ್ಯರು, ಗ್ರಾಪಂ ಪಿಡಿಒ ಹಾಗೂ ಪಂಚಾಯತಿ ಸಿಬ್ಬಂದಿಯವರ ಸಹಕಾರ ಮೂಲ ಕಾರಣ. – ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶೃತಿ ವಿ ಪ್ರಕಾಶ್, ಹಾಗೂ ಉಪಾಧ್ಯಕ್ಷರಾದ ರಾಮಲಕ್ಷ್ಮಮ್ಮ ಚಂದ್ರಪ್ಪ.