Accident – ಚಾಲಕನ ನಿಯಂತ್ರಣ ತಪ್ಪಿ ಕಾರು ಅಫಘಾತಕ್ಕೀಡಾಗಿ ಯುವ ಪತ್ರಕರ್ತ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಮಾಚಹಳ್ಳಿ ಗ್ರಾಮದ ಬಳಿ ನಡೆದಿದೆ. ಮೃತ ದುರ್ದೈವಿ ಭರತ್ (32) ಗುಡಿಬಂಡೆಯಿಂದ ಬಾಗೇಪಲ್ಲಿಗೆ ಹೋಗುವಾಗ ಜ.12ರ ರಾತ್ರಿ ಸುಮಾರು 10.20 ರಲ್ಲಿ ನಡೆದಿದ್ದು, ಈ ಕುರಿತು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ದುರ್ದೈವಿ ಭರತ್ ಬೆಂಗಳೂರಿನಲ್ಲಿ ಖಾಸಗಿ ಪತ್ರಿಕೆಯಲ್ಲಿ ವಿಶೇಷ ವರದಿಗಾರನಾಗಿ ಭರತ್ ಕೆಲಸ ಮಾಡುತ್ತಿದ್ದ. ಜೊತೆಗೆ ಹಲವು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ವಿಶೇಷ ವರದಿಗಾರರಾಗಿ ಕೆಲಸ ಮಾಡುತ್ತಿದ್ದ. ತಮ್ಮ ಮಗುವಿನ ನಾಮಕರಣ ಕಾರ್ಯಕ್ರಮ ಮುಂದಿನ ತಿಂಗಳು ಹಮ್ಮಿಕೊಂಡಿದ್ದು, ಈ ಸಂಬಂಧ ಫಂಕ್ಷನ್ ಹಾಲ್ ಸೇರಿದಂತೆ ಹಲವು ಕೆಲಸಗಳ ನಿಮಿತ್ತ ಜ.12 ರಂದು ಗುಡಿಬಂಡೆಗೆ ಆಗಮಿಸಿದ್ದ. ಕೆಲಸವನ್ನು ಮುಗಿಸಿಕೊಂಡು ಬಾಗೇಪಲ್ಲಿಯಲ್ಲಿದ್ದ ಹೆಂಡತಿ ಮನೆಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.
ಇನ್ನೂ ಭರತ್ ಗುಡಿಬಂಡೆಯಲ್ಲಿರುವ ಅವರ ಮನೆಯಿಂದ ಬಾಗೇಪಲ್ಲಿ -ಗುಡಿಬಂಡೆ ಮಾರ್ಗವಾಗಿ ಕಾರಿನಲ್ಲಿ ಬರುತ್ತಿದ್ದಾಗ ಮಾಚಹಳ್ಳಿ ಎಂಬಲ್ಲಿ ಕಾರು ನಿಯಂತ್ರಣ ತಪ್ಪಿ ಗಂಗಮ್ಮನ ಗುಡಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಭರತ್ ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಪತ್ನಿ, 9 ತಿಂಗಳ ಮಗು, ತಂದೆ, ತಾಯಿ, ಓರ್ವ ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಜಿಲ್ಲಾ ಹಾಗೂ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಸಂತಾಪ ಸೂಚಿಸಲಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಮಿಥುನ್ ರೆಡ್ಡಿ ಸಹ ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ. ಮಿಥುನ್ ರೆಡ್ಡಿಯವರ ಆಪ್ತ ಸಹಾಯಕರಾಗಿಯೂ ಭರತ್ ಕೆಲಸ ಮಾಡಿದ್ದರು. ಮೃತರ ಕುಟುಂಬಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.