Bengaluru Stampede – ಐಪಿಎಲ್ 2025 ಟ್ರೋಫಿ ಗೆದ್ದು ಬೀಗುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಜಯೋತ್ಸವದ ವೇಳೆ ನಡೆದ ಭೀಕರ ಕಾಲ್ತುಳಿತ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಹೃದಯವಿದ್ರಾವಕ ದುರಂತದಲ್ಲಿ 11 ಅಮಾಯಕ ಜೀವಗಳು ಬಲಿಯಾಗಿದ್ದು, 33ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಂಭ್ರಮದ ವಾತಾವರಣ ಕ್ಷಣಾರ್ಧದಲ್ಲಿ ಶೋಕಸಾಗರಕ್ಕೆ ತಿರುಗಿದ್ದು, ಈ ಘಟನೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Bengaluru Stampede – ಹೃದಯವಿದ್ರಾವಕ ಎಂದ ಪ್ರಧಾನಿ ಮೋದಿ
ಈ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. “ಬೆಂಗಳೂರಿನಲ್ಲಿ ನಡೆದ ಅಪಘಾತ ನಿಜಕ್ಕೂ ಹೃದಯವಿದ್ರಾವಕ. ಈ ದುರಂತದ ಸಮಯದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ನನ್ನ ಆಳವಾದ ಅನುಕಂಪವಿದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಪ್ರಧಾನಿ ಮೋದಿ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
Bengaluru Stampede – ಸಿಎಂ ಸಿದ್ದರಾಮಯ್ಯರಿಂದ ನ್ಯಾಯಾಂಗ ತನಿಖೆಗೆ ಆದೇಶ
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. “ಈ ದುರಂತ ಸಂಭವಿಸಬಾರದಿತ್ತು. ನನಗೂ ಬಹಳ ದುಃಖವಾಗಿದೆ. ನಿರೀಕ್ಷೆಗೂ ಮೀರಿ ಆರ್‌ಸಿಬಿ ಅಭಿಮಾನಿಗಳು ಬಂದಿದ್ದರು. ಇಂತಹ ದುರಂತವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಮೃತಪಟ್ಟವರಲ್ಲಿ ಹೆಚ್ಚಿನವರು ಯುವಕ-ಯುವತಿಯರೇ ಆಗಿದ್ದಾರೆ. ಒಂದು ಮಗು ಕೂಡ ಮೃತಪಟ್ಟಿದೆ. ಈ ಘಟನೆಗೆ ಕಾರಣವೇನೆಂಬ ಬಗ್ಗೆ ವರದಿ ನೀಡಲು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದೇನೆ” ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Bengaluru Stampede – “ಹೃದಯವಿದ್ರಾವಕ ಘಟನೆ” – ಅಸಾದುದ್ದೀನ್ ಓವೈಸಿ ಸಂತಾಪ
ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ (Asaduddin Owaisi) ಕೂಡ ಈ ಘಟನೆಯ ಬಗ್ಗೆ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ. “ಇದು ತುಂಬಾ ದುರದೃಷ್ಟಕರ ಮತ್ತು ಹೃದಯವಿದ್ರಾವಕ. ಸಂತೋಷದ ಸಂದರ್ಭದಲ್ಲಿ, ಜನರು ಒಟ್ಟುಗೂಡಿದಾಗ, ಇದು ತುಂಬಾ ದುರದೃಷ್ಟಕರ ಸಂಗತಿ. ಇದನ್ನು ತಡೆಯಲು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಏಳು ಜನರು ಪ್ರಾಣ ಕಳೆದುಕೊಂಡಿದ್ದಾರೆ” ಎಂದು ಅವರು ಹೇಳಿದ್ದಾರೆ.
Bengaluru Stampede – ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಮರುಗಿದ ವಿಜಯ್ ಮಲ್ಯ! ಆರ್‌ಸಿಬಿ ಮಾಜಿ ಮಾಲೀಕರಿಂದ ಸಂತಾಪ
ಆರ್‌ಸಿಬಿ ತಂಡ ಕಪ್ ಗೆದ್ದ ಸಂಭ್ರಮದ ನಡುವೆಯೂ, ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತಕ್ಕೆ ಆರ್‌ಸಿಬಿ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ (Vijay Mallya) ಕೂಡ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. “ಬೆಂಗಳೂರಿನಲ್ಲಿ ಸಂಭವಿಸಿದ ಜೀವಹಾನಿ ಮತ್ತು ಗಾಯಗಳ ಬಗ್ಗೆ ಕೇಳಿ ತುಂಬಾ ದುಃಖವಾಯಿತು. ಐಪಿಎಲ್ ಚಾಂಪಿಯನ್‌ಗಳನ್ನು ಸಂಭ್ರಮಿಸಲು ಬಂದಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ಅವರು ಪಡೆಯದ ದುರಾದೃಷ್ಟ ಎದುರಾಯಿತು. ದುರದೃಷ್ಟಕರ ಸಂತ್ರಸ್ತ ಕುಟುಂಬಗಳಿಗೆ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಓಂ ಶಾಂತಿ” ಎಂದು ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ.
ಇನ್ನೂ ಈ ದುರಂತಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ದ್ರೌಪತಿ ಮರ್ಮು, ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ಸಂತಾಪ ಸೂಚಿಸಿದ್ದಾರೆ. ಜೊತೆಗೆ ಬಿಜೆಪಿ ನಾಯಕರು ಕಾಂಗ್ರೇಸ್ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
Read this also : ಎಲ್‌ಐಸಿ ಜೀವನ್ ಆನಂದ್ ಪಾಲಿಸಿ: ನಿಮ್ಮ ಭವಿಷ್ಯಕ್ಕೆ ಭದ್ರ ಬುನಾದಿ, ಯೋಜನೆಯ ಪ್ರಮುಖ ಲಾಭಗಳೇನು? ಈ ಸುದ್ದಿ ಓದಿ….!
ಈ ದುರಂತವು ಸಂಭ್ರಮದ ಕ್ಷಣಗಳನ್ನು ಶೋಕಕ್ಕೆ ತಿರುಗಿಸಿದ್ದು, ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.