Death – ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಯುವ ಪ್ರತಿಭೆಯೊಂದು ಪಂಜಾಬ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಸುದ್ದಿ ಆಘಾತ ಮೂಡಿಸಿದೆ. ಮೇ 17ರ ಸಂಜೆ ನಡೆದ ಈ ದುರಂತದಲ್ಲಿ, ಏರೋಸ್ಪೇಸ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ 22 ವರ್ಷದ ಆಕಾಂಕ್ಷಾ ಎಸ್. ನಾಯರ್ (Aakanksha S. Nayar) ಮೃತಪಟ್ಟಿದ್ದಾರೆ. ಪೊಲೀಸರು ಆಕೆ ಕಾಲೇಜಿನ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.
Death – ದಿಗ್ಭ್ರಮೆಗೊಂಡ ಪೋಷಕರು
ತಮ್ಮ ಮಗಳ ಸಾವಿನ ಸುದ್ದಿ ತಿಳಿದ ತಕ್ಷಣ ಆಕಾಂಕ್ಷಾ ಅವರ ಪೋಷಕರಾದ ಸುರೇಂದ್ರ ಮತ್ತು ಸಿಂಧೂದೇವಿ ಅವರು ತಕ್ಷಣವೇ ಪಂಜಾಬ್‌ಗೆ ಪ್ರಯಾಣ ಬೆಳೆಸಿದ್ದಾರೆ. ಈ ಕುರಿತು ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಆಕಾಂಕ್ಷಾ ಪಂಜಾಬ್‌ನ ಎಲ್.ಸಿ.ಯು ಪಗ್ವಾಡ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಕಳೆದ ಆರು ತಿಂಗಳಿಂದ ದೆಹಲಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ (Aerospace Engineer) ಆಗಿ ಉದ್ಯೋಗದಲ್ಲಿದ್ದರು. ಅಷ್ಟೇ ಅಲ್ಲ, ಉನ್ನತ ವ್ಯಾಸಂಗಕ್ಕಾಗಿ ಜಪಾನ್‌ಗೆ ಹೋಗುವ ಯೋಜನೆಯನ್ನೂ ಹಾಕಿಕೊಂಡಿದ್ದರು. ಇದಕ್ಕಾಗಿ ನಿನ್ನೆ ಅವರು ಕಾಲೇಜಿಗೆ ತೆರಳಿ ಅಗತ್ಯವಿದ್ದ ಪ್ರಮಾಣಪತ್ರಗಳನ್ನು ಪಡೆದುಕೊಂಡು ಬಂದಿದ್ದರು. ಈ ಸಂತಸದ ವಿಷಯವನ್ನು ಅವರು ತಮ್ಮ ಪೋಷಕರಿಗೂ ದೂರವಾಣಿ ಮೂಲಕ ತಿಳಿಸಿದ್ದರು.
Death – ಕೊಲೆಯ ಶಂಕೆ ವ್ಯಕ್ತಪಡಿಸಿದ ಪೋಷಕರು
ಪಂಜಾಬ್‌ಗೆ ತೆರಳುತ್ತಿದ್ದ ಆಕಾಂಕ್ಷಾ ಅವರ ಪೋಷಕರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಶಾಸಕ ಹರೀಶ್ ಪೂಂಜಾ ಅವರು ಸಂತೈಸಿದರು. ಈ ಸಂದರ್ಭದಲ್ಲಿ ಆಕಾಂಕ್ಷಾ ಅವರ ಪೋಷಕರು, “ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಇದು ಖಂಡಿತಾ ಕೊಲೆಯಾಗಿರಬಹುದು” ಎಂದು ತಮ್ಮ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
Read this also : ಕ್ಲಾಸ್ ರೂಂ ನಿಂದ ಹೊರಬಂದು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ, ಸಿಸಿಟಿವಿಯಲ್ಲಿ ಭಯಾನಕ ವಿಡಿಯೋ ಸೆರೆ…!
Death – ಮೃತ ಆಕಾಂಕ್ಷಾ ತಂದೆ ಸುರೇಂದ್ರ ಅವರ ಹೇಳಿಕೆ
ಈ ಕುರಿತು ಮಾತನಾಡಿದ ಮೃತ ಆಕಾಂಕ್ಷಾ ಅವರ ತಂದೆ ಸುರೇಂದ್ರ ಅವರು, “ನನ್ನ ಮಗಳಿಗೆ ಜರ್ಮನಿಗೆ ಹೋಗಿ ಎರಡು ವರ್ಷಗಳ ಕೋರ್ಸ್ ಮಾಡುವ ಆಸೆಯಿತ್ತು. ಅದಕ್ಕಾಗಿ ಒಂದು ಪ್ರಮಾಣಪತ್ರದ ಅಗತ್ಯವಿತ್ತು. ಕಾಲೇಜಿನಲ್ಲಿ ಕೇಳಿದಾಗ, ಅದನ್ನು ಕಳುಹಿಸಲು ಸಾಧ್ಯವಿಲ್ಲ, ನೀವೇ ಇಲ್ಲಿಗೆ ಬನ್ನಿ ಎಂದು ಹೇಳಿದ್ದರಂತೆ. ನಿನ್ನೆ ಪಂಜಾಬ್‌ಗೆ ಹೋಗಿ ತನ್ನ ಸ್ನೇಹಿತೆಯರ ರೂಮಿನಲ್ಲಿ ಉಳಿದುಕೊಂಡಿದ್ದಳು” ಎಂದು ತಿಳಿಸಿದರು.
“ಒಬ್ಬ ಸ್ನೇಹಿತ ಅವಳನ್ನು ಬೆಳಗ್ಗೆ 9.30ಕ್ಕೆ ಕಾಲೇಜಿಗೆ ಡ್ರಾಪ್ ಮಾಡಿದ್ದ. 11.30ಕ್ಕೆ ಕಾಲೇಜಿನಲ್ಲೇ ಇದ್ದೇನೆ ಎಂದು ಮೆಸೇಜ್ ಮಾಡಿದ್ದಳು. ಮಧ್ಯಾಹ್ನ ಕರೆ ಮಾಡಿದರೆ ಫೋನ್ ರಿಸೀವ್ ಮಾಡಲಿಲ್ಲ. ಸಂಜೆ ಜಲಂಧರ್ ಪೊಲೀಸ್ ಠಾಣೆಯಿಂದ ಕರೆ ಮಾಡಿ, ನಿಮ್ಮ ಮಗಳು ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದಿದ್ದಾಳೆ ಎಂದು ಹೇಳಿದರು. ಹೆಚ್ಚಿನ ಮಾಹಿತಿಯನ್ನು ಅವರು ನೀಡುತ್ತಿಲ್ಲ. ಕೇಳಿದರೆ ನೀವೇ ಬನ್ನಿ ಎಂದು ಹೇಳುತ್ತಿದ್ದಾರೆ. ಸರ್ಟಿಫಿಕೇಟ್ ವಿಚಾರದಲ್ಲಿ ಕಾಲೇಜಿನವರಿಂದ ಏನೋ ತೊಂದರೆಯಾಗಿದೆ ಎನ್ನುವ ಅನುಮಾನ ನಮಗಿದೆ. ಈಗ ನಾವು ದೆಹಲಿ ಏರ್‌ಪೋರ್ಟ್‌ನಲ್ಲಿದ್ದೇವೆ. ಮಧ್ಯಾಹ್ನ 2.30ಕ್ಕೆ ಅಮೃತಸರಕ್ಕೆ ವಿಮಾನವಿದೆ. ಸಂಜೆ ವೇಳೆಗೆ ಅಲ್ಲಿ ತಲುಪುತ್ತೇವೆ” ಎಂದು ಅವರು ದುಃಖದಿಂದ ನುಡಿದಿದ್ದಾರೆ.