ಇವತ್ತಿನ ಡಿಜಿಟಲ್ ಜಮಾನಾದಲ್ಲಿ ನಾವೆಲ್ಲಾ ಜೇಬಿನಲ್ಲಿ ಕಾಸು ಇಟ್ಟುಕೊಂಡು ಓಡಾಡುವುದನ್ನೇ ಕಡಿಮೆ ಮಾಡಿದ್ದೇವೆ. ಚಹಾ ಅಂಗಡಿಯಿಂದ ಹಿಡಿದು ದೊಡ್ಡ ಮಾಲ್‌ಗಳವರೆಗೆ ಎಲ್ಲದಕ್ಕೂ ಮೊಬೈಲ್ ಸ್ಕ್ಯಾನ್ ಮಾಡಿ ‘ಖಟಕ್’ ಅಂತ ಪೇಮೆಂಟ್ ಮಾಡ್ತೀವಿ. ಆದ್ರೆ, ಕೆಲವೊಮ್ಮೆ ಕೈಯಲ್ಲಿ ಹಾರ್ಡ್ ಕ್ಯಾಶ್ ಇರಲೇಬೇಕಾದ ಪರಿಸ್ಥಿತಿ ಬರುತ್ತೆ. ಅಂತಹ ಟೈಮ್‌ನಲ್ಲಿ ನಮಗೆ ತಕ್ಷಣ ನೆನಪಾಗುವುದೇ ಎಟಿಎಂ (ATM Safety Tips) ಮಷೀನ್‌ಗಳು. ಬ್ಯಾಂಕ್‌ಗೆ ಹೋಗಿ ಕ್ಯೂ ನಿಲ್ಲುವ ತಾಪತ್ರಯ ತಪ್ಪಿಸಿರುವ ಈ ಎಟಿಎಂಗಳು ನಮ್ಮ ಲೈಫ್ ಅನ್ನು ಈಸಿ ಮಾಡಿರುವುದು ಸುಳ್ಳಲ್ಲ.

ಆದರೆ, ಎಟಿಎಂನಲ್ಲಿ ಹಣ ವಿತ್‌ಡ್ರಾ ಮಾಡಿದ ತಕ್ಷಣ ನಾವೆಲ್ಲರೂ ಸೈಲೆಂಟ್ ಆಗಿ ಒಂದು ಕೆಲಸ ಮಾಡ್ತೀವಿ. ಅದೇನಪ್ಪಾ ಅಂದರೆ, ಹಣ ಕೈಗೆ ಬರುತ್ತಿದ್ದಂತೆ ಅಲ್ಲಿರುವ ‘ಕ್ಯಾನ್ಸಲ್’ (Cancel) ಬಟನ್ ಅನ್ನು ಫಟಾಫಟ್ ಅಂತ ನಾಲ್ಕೈದು ಬಾರಿ ಪ್ರೆಸ್ ಮಾಡ್ತೀವಿ! ಹೀಗೆ ಮಾಡುವುದರಿಂದ ನಮ್ಮ ಎಟಿಎಂ ಪಿನ್ ನಂಬರ್ ಡಿಲೀಟ್ ಆಗುತ್ತೆ, ನಮ್ಮ ಅಕೌಂಟ್ ಸೇಫ್ ಆಗಿರುತ್ತೆ ಅಂತ ನಮ್ಮಲ್ಲಿ ಹಲವರು ಗಟ್ಟಿಯಾಗಿ ನಂಬಿದ್ದಾರೆ. ಆದರೆ, ನಿಜವಾಗಿಯೂ ಹೀಗೆ ಮಾಡುವುದರಿಂದ ಅಕೌಂಟ್ ಸೇಫ್ ಆಗುತ್ತಾ? ಬ್ಯಾಂಕಿಂಗ್ ನಿಯಮಗಳು ಏನು ಹೇಳುತ್ತವೆ? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ATM Safety Tips – ‘ಕ್ಯಾನ್ಸಲ್’ ಬಟನ್ ಹಿಂದಿರುವ ಅಸಲಿ ಸತ್ಯವೇನು?
ನಾವು ಇಷ್ಟು ದಿನ ಅಂದುಕೊಂಡಿದ್ದ ನಂಬಿಕೆಗೆ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಗ್ ಶಾಕ್ ನೀಡಿವೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ “ಕ್ಯಾನ್ಸಲ್ ಬಟನ್ ಒತ್ತಿದರೆ ಪಿನ್ ಹ್ಯಾಕ್ ಆಗಲ್ಲ” ಎಂಬ ಸುದ್ದಿಯನ್ನು ಪಿಐಬಿ ಫ್ಯಾಕ್ಟ್-ಚೆಕ್ ಸಂಪೂರ್ಣವಾಗಿ ಸುಳ್ಳು ಎಂದು ಸ್ಪಷ್ಟಪಡಿಸಿದೆ.
ಸರ್ಕಾರದ ಸ್ಪಷ್ಟನೆ ಏನು?: ಎಟಿಎಂ ಯಂತ್ರದಲ್ಲಿರುವ ಕ್ಯಾನ್ಸಲ್ ಬಟನ್ ಕೇವಲ ನೀವು ಮಾಡುತ್ತಿರುವ ಪ್ರಸ್ತುತ ವಹಿವಾಟನ್ನು (Transaction) ಅರ್ಧಕ್ಕೆ ನಿಲ್ಲಿಸಲು ಮಾತ್ರ ಇರುತ್ತದೆ. ಇದನ್ನು ಪದೇ ಪದೇ ಒತ್ತುವುದರಿಂದ ಕಾರ್ಡ್ ಸ್ಕಿಮ್ಮಿಂಗ್ ಅಥವಾ ಹ್ಯಾಕಿಂಗ್‌ನಂತಹ ಹೈಟೆಕ್ ವಂಚನೆಗಳನ್ನು ತಡೆಯಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಇಂತಹ ವದಂತಿಗಳನ್ನು ನಂಬಿ ಸುರಕ್ಷತೆಯ ವಿಷಯದಲ್ಲಿ ಬೇಜವಾಬ್ದಾರಿಯಾಗಿ ಇರಬೇಡಿ ಎಂದು ಆರ್ ಬಿಐ ಎಚ್ಚರಿಸಿದೆ.
ವಂಚಕರ ಹೊಸ ಟಾರ್ಗೆಟ್: ಎಟಿಎಂ ಕಾರ್ಡ್‌ಗಳು!
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರಿಮಿನಲ್‌ಗಳು ಎಟಿಎಂ ಸೆಂಟರ್‌ಗಳನ್ನೇ ತಮ್ಮ ಅಡ್ಡಾ ಮಾಡಿಕೊಳ್ಳುತ್ತಿದ್ದಾರೆ. ಕಾರ್ಡ್ ಸ್ಕಿಮ್ಮಿಂಗ್, ಕೀಪ್ಯಾಡ್ ಟ್ಯಾಂಪರಿಂಗ್ ನಂತಹ ತಂತ್ರಜ್ಞಾನ ಬಳಸಿ ಜನರ ಕಷ್ಟದ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಅದರಲ್ಲೂ ಮುಗ್ಧ ಜನ ಹಾಗೂ ಹಿರಿಯ ನಾಗರಿಕರೇ ಇವರ ಮುಖ್ಯ ಟಾರ್ಗೆಟ್. ನಾವು ಮಾಡುವ ಒಂದು ಸಣ್ಣ ನಿರ್ಲಕ್ಷ್ಯ, ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಸೆಕೆಂಡುಗಳಲ್ಲಿ ಖಾಲಿ ಮಾಡಿಬಿಡಬಹುದು.
ಎಟಿಎಂ ವಂಚನೆಯಿಂದ ಪಾರಾಗಲು ಈ 4 ಸೂತ್ರಗಳನ್ನು ನೆನಪಿಡಿ
ಬರೀ ಕ್ಯಾನ್ಸಲ್ ಬಟನ್ ಒತ್ತಿದರೆ ನಿಮ್ಮ ಹಣ ಸೇಫ್ ಆಗಲ್ಲ. ನಿಮ್ಮ ಖಾತೆ ಸುರಕ್ಷಿತವಾಗಿರಬೇಕಾದರೆ ಎಟಿಎಂ ಬಳಸುವಾಗ ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ:
1. ಕಾರ್ಡ್ ಸ್ಲಾಟ್ ಅನ್ನು ಒಮ್ಮೆ ಚೆಕ್ ಮಾಡಿ (Card Skimming)
ನೀವು ಎಟಿಎಂ ಕಾರ್ಡ್ ಇನ್ಸರ್ಟ್ ಮಾಡುವ ಜಾಗದಲ್ಲಿ (Card Reader) ವಂಚಕರು ‘ಸ್ಕಿಮ್ಮರ್’ ಎಂಬ ಕಳ್ಳ ಸಾಧನವನ್ನು ಫಿಕ್ಸ್ ಮಾಡಿರಬಹುದು. ಇದು ನಿಮ್ಮ ಕಾರ್ಡ್‌ನ ಸಂಪೂರ್ಣ ಡೇಟಾವನ್ನು ಕಾಪಿ ಮಾಡಿಕೊಳ್ಳುತ್ತದೆ. ಹಾಗಾಗಿ, ಕಾರ್ಡ್ ಹಾಕುವ ಮುನ್ನ ಆ ಜಾಗದಲ್ಲಿ ಏನಾದರೂ ಪ್ಲಾಸ್ಟಿಕ್ ಅಥವಾ ಗಮ್ ಪಾರ್ಟ್ ಎದ್ದು ಬಂದಂತೆ ಅಸಹಜವಾಗಿ ಕಂಡರೆ ತಕ್ಷಣ ಆ ಎಟಿಎಂ ಬಳಸುವುದನ್ನು ನಿಲ್ಲಿಸಿ.
2. ಪಿನ್ ಎಂಟರ್ ಮಾಡುವಾಗ ಮತ್ತೊಂದು ಕೈ ಅಡ್ಡ ಹಿಡಿಯಿರಿ
ಎಟಿಎಂ ಕೀಪ್ಯಾಡ್‌ನ ಮೇಲ್ಭಾಗದಲ್ಲಿ ವಂಚಕರು ಅತ್ಯಂತ ಸಣ್ಣ ಹಿಡನ್ ಕ್ಯಾಮೆರಾಗಳನ್ನು ಅಡಗಿಸಿಟ್ಟಿರುವ ಸಾಧ್ಯತೆ ಇರುತ್ತದೆ. ನೀವು ಪಿನ್ ನಂಬರ್ ಒತ್ತುವುದು ಅದರಲ್ಲಿ ರೆಕಾರ್ಡ್ ಆಗಬಹುದು. ಆದ್ದರಿಂದ, ಒಂದು ಕೈಯಿಂದ ಪಿನ್ ಒತ್ತುವಾಗ, ಮತ್ತೊಂದು ಕೈಯನ್ನು ಕೀಪ್ಯಾಡ್‌ಗೆ ಕವಚದಂತೆ ಅಡ್ಡಲಾಗಿ ಹಿಡಿದುಕೊಳ್ಳಿ. Read this also : ಎಟಿಎಂ ಬಳಸುವವರಿಗೆ ಶಾಕ್: ಏಪ್ರಿಲ್ 1 ರಿಂದ ಜಾರಿಯಾಗಲಿವೆ ಹೊಸ ನಿಯಮಗಳು; ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
3. ಮೊಬೈಲ್ ಮೆಸೇಜ್‌ಗಳ ಮೇಲೆ ಕಣ್ಣಿರಲಿ
ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ನ ಎಸ್‌ಎಂಎಸ್ (SMS) ಮತ್ತು ಇಮೇಲ್ ಅಲರ್ಟ್‌ಗಳನ್ನು ಸದಾ ಆನ್ ಇಟ್ಟುಕೊಳ್ಳಿ. ನಿಮ್ಮ ಗಮನಕ್ಕೆ ಬಾರದೆ ಖಾತೆಯಿಂದ ಒಂದು ರೂಪಾಯಿ ಕಟ್ ಆದರೂ ತಕ್ಷಣ ನಿಮಗೆ ಮೆಸೇಜ್ ಬರುತ್ತದೆ, ಆಗ ನೀವು ಅಲರ್ಟ್ ಆಗಬಹುದು.

4. ಕಾರ್ಡ್ ಕಳೆದುಹೋದರೆ ತಕ್ಷಣ ‘ಬ್ಲಾಕ್’ ಮಾಡಿ
ಒಂದು ವೇಳೆ ನಿಮ್ಮ ಎಟಿಎಂ ಕಾರ್ಡ್ ಎಲ್ಲಾದರೂ ಮಿಸ್ ಪ್ಲೇಸ್ ಆದ್ರೆ ಅಥವಾ ಕಳ್ಳತನವಾದರೆ, ಸ್ವಲ್ಪವೂ ತಡ ಮಾಡದೆ ನಿಮ್ಮ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಮೂಲಕ ಅಥವಾ ಬ್ಯಾಂಕಿನ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಕಾರ್ಡ್ ಅನ್ನು ತಕ್ಷಣವೇ ಬ್ಲಾಕ್ ಮಾಡಿ. ಇದು ನಿಮ್ಮ ಹಣ ದುರುಪಯೋಗವಾಗುವುದನ್ನು 100% ತಡೆಯುತ್ತದೆ.
ಸೈಬರ್ ಸುರಕ್ಷತಾ ಸೂತ್ರ (Cyber Safety Tip):
- ಅಪರಿಚಿತರು ಅಥವಾ ಎಟಿಎಂ ಸೆಂಟರ್ ಬಳಿ ಇರುವ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ನಿಮ್ಮ ಎಟಿಎಂ ಪಿನ್ (PIN) ಅಥವಾ ಒಟಿಪಿ (OTP) ಹಂಚಿಕೊಳ್ಳಬೇಡಿ.
- ಬ್ಯಾಂಕ್ ಅಧಿಕಾರಿಗಳು ಯಾರೂ ಕೂಡ ಫೋನ್ ಮಾಡಿ ನಿಮ್ಮ ಪಿನ್ ನಂಬರ್ ಕೇಳುವುದಿಲ್ಲ ಎಂಬುದನ್ನು ನೆನಪಿಡಿ.
- ನಿಮ್ಮ ಎಟಿಎಂ ಪಿನ್ ನಂಬರ್ ಅನ್ನು ಕನಿಷ್ಠ 3 ತಿಂಗಳಿಗೊಮ್ಮೆ ಬದಲಾಯಿಸುತ್ತಿರಿ.
