Crime News- ಬಹುತೇಕ ಘಟನೆಗಳಲ್ಲಿ ಮಹಿಳೆಗಾಗಿ ಗಲಾಟೆಗಳು ನಡೆದಂತಹ ಸುದ್ದಿಗಳನ್ನು ಕೇಳಿರುತ್ತೇವೆ. ಆದರೆ ಇಲ್ಲೊಂದು ಘಟನೆ ಅದಕ್ಕೆ ತದ್ವಿರುದ್ದವಾಗಿ ನಡೆದಿದೆ. ಒಬ್ಬ ವ್ಯಕ್ತಿಯನ್ನು ಮದುವೆಯಾಗಲು ಇಬ್ಬರು ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಂಜನಾನಗರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಂಜನಾನಗರದ ರವಿ ಎಂಬಾತನಿಗಾಗಿಯೇ ಇಬ್ಬರು ಮಹಿಳೆಯರು ಕಿತ್ತಾಡಿದ್ದಾರೆ. ಈಗಾಗಲೇ ರವಿ ತನ್ನ ಪತ್ನಿಯನ್ನು ಕಳೆದುಕೊಂಡಿದ್ದ. ರವಿಗೆ ಇಬ್ಬರು ಮಕ್ಕಳಿದ್ದಾರೆ. ಆದರೂ ಸಹ ರವಿಯನ್ನು ಮದುವೆಯಾಗಲು ಇಬ್ಬರು ಮಹಿಳೆಯರು ಕಿತ್ತಾಡಿದ್ದಾರೆ. ಈ ಕಿತ್ತಾಟ ತಾರಕಕ್ಕೇರಿದ್ದು ಓರ್ವ ಮಹಿಳೆ ಚಾಕುವಿನಿಂದ ಮತ್ತೊರ್ವ ಮಹಿಳೆಯನ್ನು ಇರಿದಿದ್ದಾಳೆ. ಭಾಗ್ಯ(40) ಹಾಗೂ ರುಕ್ಮಿಣಿ (38) ಎಂಬ ಇಬ್ಬರು ಮಹಿಳೆಯರು ರವಿ ಎಂಬ ಪುರುಷನನ್ನು ಮದುವೆಯಾಗಲು ಕಿತ್ತಾಡಿಕೊಂಡಿದ್ದಾರೆ. ಈ ಕಿತ್ತಾಟದ ಸಮಯದಲ್ಲಿ ರುಕ್ಮಿಣಿ ಚಾಕುವಿನಿಂದ ಇರಿದಿದ್ದಾಳೆ ಎನ್ನಲಾಗಿದೆ.
ಇನ್ನೂ ರವಿ 11 ವರ್ಷಗಳ ಹಿಂದೆ ಲಕ್ಷ್ಮಿ ಎಂಬಾಕೆಯನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ ಕೆಲವು ದಿನಗಳ ಹಿಂದೆಯಷ್ಟೆ ಲಕ್ಷ್ಮೀ ಮೃತಪಟ್ಟಿದ್ದಳು. ಬಳಿಕ ರವಿ ತನ್ನ ಮಾಜಿ ಪ್ರೇಯಸಿ ರುಕ್ಮಿಣಿಯನ್ನು ಮನೆಗೆ ಕರೆದುಕೊಂಡು ಬಂದಿದ್ದನಂತೆ. ರುಕ್ಮಿಣಿ ಸಹ ಇತ್ತೀಚಿಗೆ ತನ್ನ ಪತಿಯಿಂದ ಬೇರೆಯಾಗಿದ್ದ. ಈ ಹಿನ್ನೆಲೆಯಲ್ಲಿ ರವಿ ಹಾಗೂ ರುಕ್ಮಿಣಿ ಮದುವೆಯಾಗಲು ಸಿದ್ದರಾಗಿದ್ದರು. ಇದರ ಜೊತೆಗೆ ರವಿ ಮೊದಲ ಪತ್ನಿ ಲಕ್ಷ್ಮೀ ಯವರ ಅಕ್ಕ ಭಾಗ್ಯ ಕೂಡ ಪತಿಯನ್ನು ಬಿಟ್ಟು ರವಿಯನ್ನು ಮದುವೆಯಾಗಲು ಸಿದ್ದಳಾಗಿದ್ದಾಳೆ. ಭಾಗ್ಯ ನಿನ್ನ ಇಬ್ಬರು ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ, ನೀನು ನನ್ನನ್ನು ಮದುವೆಯಾಗಬೇಕೆಂದು ರವಿ ಬಳಿ ಒತ್ತಾಯ ಮಾಡಿದ್ದಾಳೆ ಎನ್ನಲಾಗಿದೆ.
ಆದರೆ ರುಕ್ಮಿಣಿ ರವಿ ಮನೆಯಲ್ಲಿರುವುದು ಗೊತ್ತಾಗಿದೆ. ರವಿ ಕೆಲಸಕ್ಕೆ ಹೋಗಿದ್ದಾಗ ಮನೆಗೆ ನುಗ್ಗಿದ ಭಾಗ್ಯ, ರುಕ್ಮಿಣಿ ಜೊತೆಗೆ ಜಗಳ ತೆಗೆದಿದ್ದಾಳೆ. ಜೊತೆಗೆ ಮನೆಯಿಂದ ಹೊರಕ್ಕೆ ಹಾಕಲು ಪ್ರಯತ್ನಿಸಿದ್ದಾಳೆ. ಈ ಗಲಾಟೆ ವಿಕೋಪಕ್ಕೆ ತಿರುಗಿದೆ. ರುಕ್ಮಿಣಿಗೆ ದೊಣ್ಣೆಯಿಂದ ಬಡಿದು ಚಾಕುವಿನಿಂದ ಇರಿದಿದ್ದಾಳೆ ಎನ್ನಲಾಗಿದೆ. ಸದ್ಯ ಗಾಯಗೊಂಡ ರುಕ್ಮಿಣಿಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಚಾಕುವಿನಿಂದ ಇರಿದ ಭಾಗ್ಯ ಳನ್ನು ನೆಲಮಂಗಲ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.