Sankranthi – ಸಮೃದ್ಧಿಯ ಸಂಕೇತವಾದ ಮಕರ ಸಂಕ್ರಾಂತಿ ಹಬ್ಬವನ್ನು ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲ್ಲೂಕಿನಾಧ್ಯಂತ ಮಂಗವಾರ ಶ್ರದ್ಧಾಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಹಳ್ಳಿ, ಪಟ್ಟಣದ ವಿವಿಧ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಅಭಿಷೇಕ, ಪೂಜೆ, ಮಂಗಳಾರತಿ ಕೈಂಕರ್ಯಗಳು ನಡೆದವು.
ಗುಡಿಬಂಡೆ ಪಟ್ಟಣದಲ್ಲಿ ಗ್ರಾಮ ವಿಕಾಸ ಮತ್ತು ಜನ ಕಲ್ಯಾಣ ಟ್ರಸ್ಟ್ ವತಿಯಿಂದ ಸಂಕ್ರಾಂತಿ ಸುಗ್ಗಿಯ ಹಬ್ಬದ ಅಂಗವಾಗಿ ರಾಸುಗಳನ್ನು ಬಗೆ ಬಗೆಯಲ್ಲಿ ಶೃಂಗರಿಸಿ, ತಮಟೆವಾದ್ಯಗಳೊಂದಿಗೆ ಪಟ್ಟಣದ ಮುಖ್ಯ ರಸ್ತೆ ಯಲ್ಲಿ ಮೆರವಣಿಗೆ ನಡೆಸಿ ಸಂಜೆ ವೇಳೆ ಕಿಚ್ಚು ಹಾಯಿಸಿ ಸಂಭ್ರಮಪಟ್ಟರು. ಹಬ್ಬದ ಪ್ರಯುಕ್ತ ಮಹಿಳೆಯರು ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿದ್ದರು.
ಹಬ್ಬದ ನಿಮಿತ್ತ ಅವರೆಕಾಯಿ, ನೆಲಗಡಲೆ, ಕಬ್ಬು, ಪೊಂಗಲ್ ಸೇರಿದಂತೆ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ಬಂಧು ಬಳಗದವರೆಲ್ಲ ಸೇರಿ ಸಂಭ್ರಮದಿಂದ ಹಬ್ಬ ಆಚರಿಸಿ, ಊಟ ಸವಿದರು. ಸಂಜೆ ವೇಳೆ ದನಕರುಗಳಿಗೆ ಕಿಚ್ಚು ಹಾಯಿಸುತ್ತಿದ್ದ ದೃಶ್ಯಗಳು ಗಮನ ಸೆಳೆದವು. ಗ್ರಾಮ ವಿಕಾಸ ಮತ್ತು ಜನ ಕಲ್ಯಾಣ ಟ್ರಸ್ಟ್ ವತಿಯಿಂದ ಉತ್ತಮ ರೀತಿಯಲ್ಲಿ ಸಿಂಗಾರಗೊಂಡಿದ್ದ ರಾಸು ಗಳಿಗೆ ಬಹುಮಾನ ಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ವಿಕಾಸ ಸಂಸ್ಥೆಯ ಶ್ರೀಧರ್ ಸಾಗರ್ ಜಿ, ವಾಹಿನಿ ಸುರೇಶ್, ಜನ ಕಲ್ಯಾಣ ಟ್ರಸ್ಟ್ ನ ರಾಜಗೋಪಾಲ್, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಸ.ನಾ. ನಾಗೇಂದ್ರ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಮಂಜುನಾಥ, ಸೇರಿದಂತೆ ಗ್ರಾಮ ವಿಕಾಸ ಸಮಿತಿ ಸದಸ್ಯರು ಭಾಗವಹಿಸಿದ್ದರು.