Sankranthi Celebration – ಇಂದಿನ ತಂತ್ರಜ್ಞಾನ ಯುಗದಲ್ಲಿ ಹಳ್ಳಿ ಸಂಪ್ರದಾಯಗಳು ಮರೆಯಾಗುತ್ತಿದ್ದು, ಹಬ್ಬ ಹರಿದಿನಗಳನ್ನು ಸಹ ಮರೆಯುತ್ತಿದ್ದೇವೆ. ಆದ್ದರಿಂದ ನಮ್ಮ ಸಂಪ್ರದಾಯಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವಂತಹ ಕೆಲಸವಾಗಬೇಕಿದೆ. ಹಬ್ಬಗಳ ಇತಿಹಾಸ ಅವುಗಳ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸುವಂತಹ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ಹಮ್ಮಿಕೊಂಡಿದ್ದ 2025ನೇ ಸಾಲಿನ ಸಂಕ್ರಾಂತಿ ಸಂಭ್ರಮ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ರಂಗೋಲಿ ಸ್ಪರ್ಧೆ ಹಾಗೂ ರಾಸುಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಮಕ್ಕಳನ್ನು ತಮ್ಮ ಜೊತೆಯಲ್ಲೇ ಇಟ್ಟುಕೊಂಡು ನಾವು ಆಚರಿಸುತ್ತಿರುವ ಹಬ್ಬಗಳ ವೈಶಿಷ್ಟತೆಯನ್ನು, ಹಬ್ಬದ ಇತಿಹಾಸ ಹಾಗೂ ಹಿನ್ನಲೆಯ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟರೆ ಮಕ್ಕಳು ಸಹ ಮುಂದಿನ ಪೀಳಿಗೆಗೆ ನಮ್ಮ ಆಚಾರ ವಿಚಾರಗಳನ್ನು ಉಳಿಸಬಹುದಾಗಿದೆ. ಇಂದು ನಾವು ಆಚರಿಸುತ್ತಿರುವ ಸಂಕ್ರಾಂತಿ ಹಬ್ಬ ಬೆಂಗಳೂರಿನಲ್ಲಿರುವಂತಹ ಅನೇಕರಿಗೆ ತಿಳಿದೇ ಇರುವುದಿಲ್ಲ.
ಕೆಲವೊಂದು ಕಡೆ ಸಂಕ್ರಾಂತಿ ಹಬ್ಬದಂದು ಬೊಂಬೆ ಎತ್ತುಗಳನ್ನು ತಂದು ಅವುಗಳಿಗೆ ಪೂಜೆ ಮಾಡಿ ಸಂಕ್ರಾಂತಿಯನ್ನು ಆಚರಿಸುವಂತವರು ಇದ್ದಾರೆ. ಮಕ್ಕಳಿಗೆ ಹಸುಗಳ ತಳಿಗಳ ಬಗ್ಗೆ ಗೊತ್ತೇ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಹಸುಗಳಿಂದ ಹಾಲು ಯಾವ ರೀತಿ ಬರುತ್ತದೆ ಎಂಬುದನ್ನುಮಕ್ಕಳು ಕೇಳುವ ಪರಿಸ್ಥಿತಿ ಬರಬಹುದು. ಆದ್ದರಿಂದ ನಮ್ಮ ಮುಂದಿನ ಪೀಳಿಗೆ ನಮ್ಮ ಸಂಪ್ರದಾಯವನ್ನು ಉಳಿಸಲು ನಾವೆಲ್ಲರೂ ಅವರಿಗೆ ಸಂಕ್ರಾಂತಿ ಸೇರಿದಂತೆ ನಮ್ಮ ಹಬ್ಬಗಳ ಮಹತ್ವ ಹಾಗೂ ಇತಿಹಾಸ ತಿಳಿಸಬೇಕೆಂದರು.
ಇದೇ ಸಮಯದಲ್ಲಿ ಬಾಗೇಪಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ಶ್ಯಾಮಲ, ತನ್ನ ಮಧುರ ಕಂಠದಲ್ಲಿ ಜಾನಪದ ಗೀತೆ ಹಾಗೂ ಭಕ್ತಿ ಗೀತೆಯನ್ನು ಸುಮಧುರವಾಗಿ ಹಾಡಿದ್ದು, ವಿದ್ಯಾರ್ಥಿನಿಗೆ ಹಾಡುಗಳ ರಿಯಾಲಿಟಿ ಶೋ ನಲ್ಲಿ ಅವಕಾಶ ಕಲ್ಪಿಸುವಂತೆ ಕಾರ್ಯಕ್ರಮದ ಆಯೋಜಕರು ಶಾಸಕರಲ್ಲಿ ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿದ ಶಾಸಕ ಸುಬ್ಬಾರೆಡ್ಡಿ ಮಗು ಯಾವುದೇ ರೀಯಾಲಿಟಿ ಶೋಗಳಲ್ಲಿ ಭಾಗವಹಿಸಲು ನನ್ನಿಂದ ಏನೆಲ್ಲಾ ಕೆಲಸ ಆಗಬೇಕಿದೆಯೋ ಎಲ್ಲವನ್ನೂ ಮಾಡುತ್ತೇನೆ. ಈ ರೀತಿಯ ಪ್ರತಿಭೆಗಳು ಗ್ರಾಮೀಣ ಭಾಗಗಳಲ್ಲಿ ಮತ್ತಷ್ಟು ಹೆಚ್ಚಾಗಬೇಕು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಏನೆಲ್ಲಾ ಸೌಲಭ್ಯಗಳು ಬೇಕು ಎಲ್ಲವನ್ನೂ ಒದಗಿಸಲು ಪ್ರಯತ್ನಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಎತ್ತುಗಳಿಗೆ ಸಿಂಗಾರವನ್ನು ಮಾಡಿದಂತವರಿಗೆ ಹಾಗೂ ರಂಗೋಲಿಗಳನ್ನು ಬಿಡಿಸಿದಂತಹ ಮಹಿಳೆಯರಿಗೆ ಬಹುಮಾನಗಳನ್ನು ನೀಡಿ ಅವರನ್ನು ಬೆಂಬಲಿಸಿದರು. ಇದೇ ಸಮಯದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವರುವಂತಹ ವೈದ್ಯರುಗಳನ್ನು ಸನ್ಮಾನಿಸಿದರು. ಈ ಸಮಯದಲ್ಲಿ ತಹಶೀಲ್ದಾರ್ ಸಿಗ್ಬತ್ ವುಲ್ಲಾ, ಬಿಇಒ ಕೃಷ್ಣಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ತೇಜ್ ಆನಂದರೆಡ್ಡಿ, ತಿರುಮಣಿ ಗ್ರಾಪಂ ಅಧ್ಯಕ್ಷೆ ಮಮತಾ ಮಂಜುನಾಥ್, ಪಪಂ ಅಧ್ಯಕ್ಷ ವಿಕಾಸ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ. ನಾರಾಯಣಸ್ವಾಮಿ, ಕೃಷಿ ಇಲಾಖೆಯ ಕೇಶವರೆಡ್ಡಿ, ಮುಖಂಡರಾದ ಆದಿರೆಡ್ಡಿ, ಕೃಷ್ಣೇಗೌಡ, ಆದಿನಾರಾಯಣರೆಡ್ಡಿ, ಮಂಜುನಾಥ್, ಪ್ರಕಾಶ್, ಪರಿಮಳ, ಸೇರಿದಂತೆ ಹಲವರು ಇದ್ದರು.