Pradeep Eshwar – ಗುಡಿಬಂಡೆ ಚಿಕ್ಕನಾರಪನಹಳ್ಳಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ ಜಾಗದಲ್ಲಿ ಸುಮಾರು 20 ವರ್ಷಗಳ ಹಿಂದೆ ಕಟ್ಟಿಕೊಂಡಿರುವ 22 ಬಡವರ ಮನೆಗಳಿಗೆ ಪರಿಹಾರವಾಗಿ ಜಮೀನು ಮಾಲೀಕರಿಗೆ 2 ಲಕ್ಷ ರೂಪಾಯಿಗಳನ್ನು ವ್ಯಯಕ್ತಿಕವಾಗಿ ನೀಡಿ, ಸರಕಾರದಿಂದ ಬಡವರಿಗೆ ನಿವೇಶನಗಳ ದಾಖಲೆಗಳನ್ನು ನೀಡಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ತಿಳಿಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕನಾರಪನಹಳ್ಳಿ, ಕಮ್ಮಲಮೋರಿ ಹಾಗೂ ದಿನ್ನಹಳ್ಳಿ ಗ್ರಾಮಗಳಲ್ಲಿ ಶಾಸಕ ಪ್ರದೀಪ್ ಈಶ್ವರ್ ರವರು ನಮ್ಮ ಗ್ರಾಮ ನಮ್ಮ ಶಾಸಕರು ಕಾರ್ಯಕ್ರಮದ ನಿಮಿತ್ತ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಚಿಕ್ಕನಾರಪನಹಳ್ಳಿ, ಕಮ್ಮಲಮೋರಿ ಹಾಗೂ ದಿನ್ನಹಳ್ಳಿ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ, ಚರಂಡಿಗಳ ಸ್ವಚ್ಛತೆ, ಸಿಸಿ ರಸ್ತೆಗಳು, ಕುಡಿಯುವ ನೀರಿನ ಅಭಾವ, ಸ್ಮಶಾನಕ್ಕೆ ದಾರಿ, ನಿವೇಶನ ಹಾಗೂ ವಸತಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸಾರ್ವಜನಿಕರು ಬಗೆಹರಿಸುವಂತೆ ತಮ್ಮ ಮುಂದೆ ಅಹವಾಲು ಸಲ್ಲಿಸಿದ್ದು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಮಗಳಲ್ಲಿ ಮನೆ ಮನೆಗೂ ಕುಡಿಯುವ ನೀರು ಕಲ್ಪಿಸುವ ಜಲ ಜೀವನ್ ಮಿಷನ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ತ್ವರಿತವಾಗಿ ಹಾಗೂ ಗುಣಮಟ್ಟದ ಕಾಮಗಾರಿ ಮಾಡಿ ಮುಗಿಸುವಂತೆ ಸೂಚಿಸಿದ್ದು, ಕುಡಿಯುವ ನೀರಿಗೆ ಸಮಸ್ಯೆ ಇರುವ ಬಗ್ಗೆ ಗ್ರಾಮಸ್ಥರಿಂದ ದೂರು ಬಂದ ಹಿನ್ನಲೆಯಲ್ಲಿ ಒಂದು ವಾರದೊಳಗೆ ಹೊಸದಾಗಿ ಕೊಳವೆ ಬಾವಿ ಕೊರೆಸುವಂತೆ ಸೂಚನೆ ನೀಡಲಾಗಿದೆ. ಕೆಲವು ಗ್ರಾಮಗಳಲ್ಲಿ ಸಲ್ಲಿಕೆಯಾದ ಬಹುತೇಕ ಅರ್ಜಿಗಳಲ್ಲಿ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ, ಚರಂಡಿಗಳನ್ನು ಸ್ವಚ್ಛಗೊಳಿಸುವುದಿಲ್ಲ, ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ದೂರು ಸಲ್ಲಿಸಿದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎರಡು ದಿನಗಳ ಒಳಗಾಗಿ ಬೊಮ್ಮಗಾನಹಳ್ಳಿ ಮೂಲಕ ಚಿಕ್ಕನಾರಪನಹಳ್ಳಿ ತನಕ ಬೆಳಿಗ್ಗೆ ಹಾಗೂ ಸಂಜೆ ಬಸ್ ವ್ಯವಸ್ಥೆ ಮಾಡಲಾಗುವುದು ಎಂದರು.
ಇನ್ನೂ ಸಂಸದ ಡಾ. ಕೆ.ಸುಧಾಕರ್ ಬಗ್ಗೆ ಏನೂ ಮಾತಾಡಬಾರದು ಎಂದು ನಿರ್ಧರಿಸಲಾಗಿದೆ. ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಿ, ಜನರ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡುತ್ತೇನೆ. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಜನರ ಬಳಿಗೆ ಹೋಗಿ ಕಷ್ಟಗಳನ್ನು ಆಲಿಸುತ್ತಿರುವೆ, ಮುಖಂಡರ ಜೊತೆ ಫೋನಲ್ಲಿ ಹರಟೆ ಹೊಡೆಯುವುದು ನನಗೆ ಬರಲ್ಲ, ಮುಡ ಪ್ರಕರಣದಲ್ಲಿ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ, ಸಿಎಂ ಶುದ್ಧ ಹಸ್ತದ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ಈ ಸಂದರ್ಭದಲ್ಲಿ ಹಲವರು ಆಧಾರ್ ಕಾರ್ಡ್ ಸಮಸ್ಯೆಯಿಂದ ವೃದ್ದಾಪ್ಯ ವೇತನ ಸಿಗುತ್ತಿಲ್ಲ, ಕೆಲವರು ಪಡಿತರ ಸಿಗುತ್ತಿಲ್ಲ ಎಂದು ದೂರು ಸಲ್ಲಿಸಿದರೆ. ಕೆಲವರು ಗ್ರಾಮದಲ್ಲಿ ಚರಂಡಿ ನಿರ್ಮಾಣ ಮಾಡುವಂತೆ, ಶಾಲೆ ದುರಸ್ತಿ ಮಾಡಿ ಕೊಡುವಂತೆ, ವಿದ್ಯುತ್ ಸಂಪರ್ಕ, ಸಮುದಾಯ ಭವನ ನಿರ್ಮಿಸಿಕೊಡುವಂತೆ, ಅಕ್ರಮ ಸಕ್ರಮದಲ್ಲಿ ಜಮೀನು ಮಂಜೂರು ಮಾಡುವಂತೆ , ಸ್ಮಶಾನಕ್ಕೆ ಜಾಗ ಮಂಜೂರು ಮಾಡಿಕೊಡುವಂತೆ, ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಿಸಿ ಕೊಡುವಂತೆ, ಜಾನುವಾರುಗಳ ಓಡಾಟಕ್ಕೆ ದಾರಿ ಮಾಡಿಸಿ ಮಾಡಿಕೊಡುವಂತೆ ಹಾಗೂ ಸಾರ್ವಜನಿಕರ ಎಲ್ಲ ಅಹವಾಲು ಬಗೆಹರಿಸುವಂತೆ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಅನಿಲ್ , ತಾಪಂ ಇಒ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಶೇಷಾದ್ರಿ, ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಗ್ರಾಮ ಪಂಚಾಯತಿ ಪಿಡಿಒ ಮದ್ದರೆಡ್ಡಿ, ಸಿಬ್ಬಂದಿ ವರ್ಗ ಹಾಜರಿದ್ದರು.