Yathindra Siddaramaiah – ರಾಜಕಾರಣಗಳು ಭಾಷಣ ಮಾಡುವ ಭರದಲ್ಲಿ ವಿವಾದಕ್ಕೆ ಎಡೆ ಮಾಡಿಕೊಡುವಂತಹ ಹೇಳಿಕೆಗಳನ್ನು ನೀಡಿ ಪೇಜಿಗೆ ಸಿಲುಕುತ್ತಿರುತ್ತಾರೆ. ಇದೀಗ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ನವರು ಸಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೆಲ ನ್ಯಾಯಾಲಯಗಳು ಕೇಂದ್ರ ಬಿಜೆಪಿ ಸರ್ಕಾರ ಹೇಳಿದಂತೆ ಕೇಳುತ್ತವೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಸಚಿವ ಜಮೀರ್ ಅಹ್ಮದ್ ಸಹ ಇದೇ ರೀತಿಯ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದದ ಆದೇಶವನ್ನು ರಾಜಕೀಯ ತೀರ್ಪು ಎಂದು ಹೇಳಿದ ಸಚಿವ ಜಮೀರ್ ಅಹ್ಮದ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಸಿಎಂ ಪುತ್ರ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಸಹ ಕೆಲ ನ್ಯಾಯಾಲಯಗಳು ಕೇಂದ್ರ ಬಿಜೆಪಿ ಸರ್ಕಾರ ಹೇಳಿದಂತೆ ಕೇಳುತ್ತಿವೆ ಎಂದು ಗಂಭೀರ ಆರೋಪ (Yathindra Siddaramaiah) ಮಾಡಿ ವಿವಾದಕ್ಕೆ ಕಾರಣವಾಗಿದ್ದಾರೆ. ಹೆಚ್.ಡಿ.ಕೋಟೆಯಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಯತೀಂದ್ರ ಈ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಯತೀಂದ್ರ ನಮಗೆ ತನಿಖೆ ಭಯವಿಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ, ಕೇಂದ್ರ ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕೆಲವು ಕೋರ್ಟ್‌ಗಳೂ ಸಹ ಕೇಂದ್ರ ಬಿಜೆಪಿ ಹೇಳಿದಂತೆ ಕೇಳುತ್ತಿವೆ. ಸಿದ್ದರಾಮಯ್ಯ ಮೇಲೆ ಸುಳ್ಳು ಆರೋಪಗಳನ್ನು ಹೊರಸಿ ಅವರನ್ನು ಪ್ರಕರಣಗಳಲ್ಲಿ ಸಿಲುಕಿಸಬೇಕೆಂದು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಪ್ರಶ್ನೆ ಮಾಡದೇ ಇದ್ದರೇ ಅವರು ಆಡಿದ್ದೇ ಆಟವಾಗುತ್ತದೆ. ಕೇಂದ್ರ ಸರ್ಕಾರದ ಧೋರಣೆಗೆ ಜನರು ಮನ್ನಣೆ ನೀಡಬಾರದು. ನಮ್ಮ ಸರ್ಕಾರ, ನಮ್ಮ ನಾಯಕರು ಬಡವರ ಪರವಿದ್ದಾರೆ. ನಮ್ಮ ಪರ ನಿಮ್ಮ ಬೆಂಬಲವಿರಬೇಕೆಂದು ಮನವಿ ಮಾಡಿದರು.