ಕಂದಾಯ ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ ಸುಮಾರು 18ಕ್ಕೂ ಅಧಿಕ ಮೊಬೈಲ್/ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ, 4 ತಂತ್ರಾಂಶಗಳ ನಿರ್ವಹಣೆಗೆ ಹಲವಾರು ತೊಂದರೆ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ (Protest) ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ (village-administrative-officers) ವತಿಯಿಂದ ಪ್ರತಿಭಟನೆ ನಡೆಸಿದರು.
ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಮೊಬೈಲ್, ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರಲಾಗುತ್ತಿದೆ. ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್, ಲ್ಯಾಪ್‌ಟಾಪ್, ಅದಕ್ಕೆ ಅವಶ್ಯವಿರುವ ಇಂಟರ್‌ನೆಟ್ ಹಾಗೂ ಸ್ಕ್ಯಾನರ್‌ಗಳನ್ನು ಒದಗಿಸದೇ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರುತ್ತಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. ಆಧುನಿಕ ತಂತ್ರಾಂಶಕ್ಕೆ ಸಂಬಂಧಿಸಿದಂತೆ ಅವಶ್ಯ ಸೌಲಭ್ಯವನ್ನು ಕಲ್ಪಿಸುವವರೆಗೆ ಸೆ. 22ರಿಂದ ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗರ್‌ಹುಕುಂ, ಹಕ್ಕುಪತ್ರ, ನಮೂನೆ 1–5 ವೆಬ್ ಅಪ್ಲಿಕೇಷನ್ ಮತ್ತು ಪೌತಿ ಆಂದೋಲನ ಆ್ಯಪ್ ತಂತ್ರಾಂಶಗಳ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಪದೋನ್ನತಿ, ವರ್ಗಾವಣೆ, ನೌಕರರ ಅಮಾನತ್ತು ಸೇರಿ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ಅವುಗಳಗೆ ಸರ್ಕಾರ ಸ್ಪಂಧಿಸುವವರೆಗೂ ನಮ್ಮ ಮುಷ್ಕರವನ್ನು ಕೈಬಿಡುವುದಿಲ್ಲ ಎಂದರು.
ಈ ಸಮಯದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶಿಸಿ ನೀಡುವ ಬಗ್ಗೆ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಬಗ್ಗೆ ಹಾಗೂ ಸೇವಾ ವಿಷಯದಲ್ಲಿ ಸಂಬಂಧಿಸಿದಂತೆ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಪ್ರಮುಖ ಬೇಡಿಕೆ ಈಡೇರಿಕೆಗಾಗಿ ಹಾಗೂ ಕೆಲಸದ ಒತ್ತಡವನ್ನು ಕಡಿಮೆ ಮಾಡುವಂತೆ ಸರ್ಕಾರಕ್ಕೆ ತಹಸೀಲ್ದಾರರ ಮೂಲಕ ಮನವಿ ಪತ್ರ ಸಲ್ಲಿಸಿದರು.
ಇನ್ನೂ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರಕ್ಕೆ ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ರೈತ ಸಂಘಟನೆಗಳು ಬೆಂಬಲ ನೀಡಿದ್ದರು. ಈ ಸಮಯದಲ್ಲಿ ಗುಡಿಬಂಡೆ ತಾಲ್ಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘ ಅಧ್ಯಕ್ಷ ಶಿವಕುಮಾರ್, ತಾಲ್ಲೂಕು ಕಂದಾಯ ಇಲಾಖೆ ನೌಕರರ ಸಂಘ ಅಧ್ಯಕ್ಷ ಕಾರ್ಗಿಲ್ ಲಕ್ಷ್ಮೀನಾರಾಯಣ, ಗ್ರಾಮ ಸಹಾಯಕರ ತಾಲ್ಲೂಕು ಅಧ್ಯಕ್ಷ ಆಂಜಿನಪ್ಪ, ರಾಜಸ್ವ ನೀರಕ್ಷಕ ಕುಮಾರಸ್ವಾಮಿ, ಗ್ರಾಮ ಆಡಳಿತ ಆದಿಕಾರಿಗಳಾದ ಶಿವಪ್ರಸಾದ್, ಮಂಜುನಾಥ, ನಾಗರಾಜು, ಲೋಕೇಶ್, ಸುದರ್ಶನ್, ಪ್ರಿಯಾದಾಬೆ, ವಿದ್ಯಾಪವಾರ್, ಯೋಗಿತ, ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರೈತಪರ, ದಲಿತಪರ ಸೇರಿದಂತೆ ವಿವಿಧ ಸಂಘಗಳು ಬೆಂಬಲ ನೀಡಿದ್ದರು.