Tirumala – ಕಲಿಯುಗ ದೈವ ಎಂದೇ ಕರೆಯಲಾಗುವ ತಿರುಮಲ ತಿಮ್ಮಪ್ಪನ ದರ್ಶನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ. ತಿಮ್ಮಪ್ಪನ ದರ್ಶನ ಪಡೆಯಲು ಹಲವು ರಾಜ್ಯ, ದೇಶ-ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಾರೆ. ಇತ್ತೀಚೆಗಷ್ಟೇ ಉಂಟಾದ ಲಡ್ಡು ಪ್ರಸಾದ ವಿವಾದದ ನಡುವೆಯೂ ದೇವಾಲಯಕ್ಕೆ ಭಕ್ತರ ಸಂಖ್ಯೆಯ ಹರಿವು ಹೆಚ್ಚಾಯಿತೇ ವಿನಃ ಕಡಿಮೆ ಕಾಣಿಸಲಿಲ್ಲ. ಇದೀಗ ತಿಮ್ಮಪ್ಪನ ಭಕ್ತರಿಗೆ ಟಿಟಿಡಿ (Tirumala ) ಗುಡ್ ನ್ಯೂಸ್ ನೀಡಿದ್ದು, ಇನ್ನು ಮುಂದೆ ಕೇವಲ 2-3 ಗಂಟೆಯೊಳಗೆ ಸಾಮಾನ್ಯ ಭಕ್ತರಿಗೂ ದರ್ಶನ ಸಿಗುವಂತೆ ಅಗತ್ಯ ಕ್ರಮಗಳನ್ನು ಟಿಟಿಡಿ ತೆಗೆದುಕೊಳ್ಳುತ್ತಿದೆ ಎನ್ನಲಾಗಿದೆ.

ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ಶ್ರೀವಾಣಿ ಟ್ರಸ್ಟ್ ಅನ್ನು ವಜಾಗೊಳಿಸಿದೆ. ಕೇವಲ 2ರಿಂದ 3 ಗಂಟೆಯೊಳಗೆ ಸಾಮಾನ್ಯ ಭಕ್ತರು ದೇವರ ದರ್ಶನ ಪಡೆಯುವಂತೆ ಬದಲಾವಣೆ ತರಲು ಎಐ ಮತ್ತು ಆಧುನಿಕ ತಂತ್ರಜ್ಞಾನ ಬಳಸಲು ಕ್ರಮಕೈಗೊಳ್ಳಲಾಗಿದೆ. ಕಂಪಾರ್ಟ್‌ಮೆಂಟ್‌ಗಳಲ್ಲಿ ಭಕ್ತರಿಗೆ ತೊಂದರೆ, ಕಿರಿಕಿರಿ ಉಂಟಾಗದಂತೆ ದರ್ಶನ ಲಭ್ಯವಾಗಲು ಯೋಜನೆ ರೂಪಿಸಲಾಗಿದೆ. ಟಿಟಿಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನ್ಯಧರ್ಮೀಯ ನೌಕರರನ್ನು ವಿಆರ್ಎಸ್ ಅಥವಾ ಸರ್ಕಾರಿ ಇಲಾಖೆಗಳಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ. ಈ ಕುರಿತು ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಶ್ರೀನಿವಾಸಸೇತು ಫ್ಲೇಓವರ್ ಅನ್ನು ಗರುಡ ವಾರದಿ ಎಂದು ಮರುನಾಮಕರಣ ಮಾಡಲಾಗಿದೆ. ಅಲಿಪಿರಿಯಲ್ಲಿ ದೇವಲೋಕಕ್ಕೆ ಮಂಜೂರಾದ 20 ಎಕರೆ ಭೂಮಿಯನ್ನು ಟಿಟಿಡಿಗೆ ಹಸ್ತಾಂತರಿಸಲು ಸರ್ಕಾರಕ್ಕೆ ಪತ್ರ ಬರೆಯುವುದು, ತಿರುಮಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾಜಕೀಯದ ಬಗ್ಗೆ ಮಾತನಾಡದಂತೆ ನಿರ್ಬಂಧ ಹೇರಲಾಗಿದ್ದು, ಈ ನಿಯಮಗಳನ್ನು ಉಲ್ಲಂಘಿಸಿದರೆ ಪ್ರಕರಣ ದಾಖಲಿಸಲಾಗುವುದು ಎಂಬ ಎಚ್ಚರಿಕೆ ರವಾನಿಸಲಾಗಿದೆ.

ಇನ್ನೂ ಪ್ರತಿ ತಿಂಗಳ ಮೊದಲ ಮಂಗಳವಾರದಂದು ಸ್ಥಳೀಯರಿಗೆ ದೇವರ ದರ್ಶನ ನೀಡಲು ಟಿಟಿಡಿ ನಿರ್ಧರಿಸಿದೆ. ಶ್ರೀವಾಣಿ ಟ್ರಸ್ಟ್ ರದ್ದುಪಡಿಸಿ, ಟಿಕೆಟ್ ಮಾರಾಟದಿಂದ ಬಂದ ಹಣವನ್ನು ಟಿಟಿಡಿ ಖಾತೆಗೆ ಜಮಾ ಮಾಡಲು ಪ್ಲಾನ್ ಮಾಡಲಾಗಿದೆ. ಖಾಸಗಿ ಬ್ಯಾಂಕ್ ಠೇವಣಿಗಳಿಂದ ಸ್ವಾಮಿಗೆ ಸೇರಿದ ಹಣವನ್ನು ಸರ್ಕಾರಿ ಬ್ಯಾಂಕ್‌ಗಳಿಗೆ ಜಮಾ ಮಾಡುವುದು ಸೇರಿದಂತೆ ಭಕ್ತರಿಗೆ ಅನ್ನದಾನದಲ್ಲಿ ಮತ್ತೊಂದು ಹೊಸ ಬಗೆಯ ಖಾದ್ಯವನ್ನು ನೀಡಲು ಮಂಡಳಿ ನಿರ್ಧರಿಸಿದೆ. ನೌಕರರಿಗೆ ಬ್ರಹ್ಮೋತ್ಸವ ಉಡುಗೊರೆಯನ್ನು 14 ಸಾವಿರದಿಂದ 15,400 ರೂ.ಗೆ ಹೆಚ್ಚಿಸುವುದು ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.