Online Order – ಇತ್ತೀಚಿಗೆ ಆನ್ ಲೈನ್ ನಲ್ಲಿ ಜನರಿಗೆ ಬೇಕಾದ ವಸ್ತುಗಳನ್ನು ಬುಕ್ ಮಾಡುವುದು ಸಹಜವಾಗಿದೆ. ಕೆಲವೊಮ್ಮೆ ಆನ್ ಲೈನ್ ನಲ್ಲಿ ಬುಕ್ ಮಾಡಿದ ವಸ್ತುಗಳ ಬದಲಿಗೆ ಇಟ್ಟಿಗೆಗಳು, ಕಲ್ಲುಗಳು, ಸೋಪ್ಗಳು ಬಂದಿರುವ ಕುರಿತು ಸುದ್ದಿಗಳನ್ನು ಕೇಳಿರುತ್ತೀರಾ. ಆದರೆ ಇಲ್ಲಿ ಅದಕ್ಕೂ ಮಿಗಿಲಾದ ಘಟನೆಯೊಂದು ನಡೆದಿದೆ. ಆನ್ ಲೈನ್ ನಲ್ಲಿ ಮಹಿಳೆಯೊಬ್ಬರು (Online Order) ಎಲೆಕ್ಟ್ರಾನಿಕ್ ಉಪಕರಣದ ಪಾರ್ಸಲ್ ಬಂದಿದೆ ಎಂದು ಭಾವಿಸಿ ಪಾರ್ಸಲ್ ಓಪೆನ್ ಮಾಡಿ ನೋಡಿದಾಗ ಬಾಕ್ಸ್ ನಲ್ಲಿ ಮೃತದೇಹವಿದ್ದು, ಅದನ್ನು ನೋಡಿದ ಮಹಿಳೆ ಶಾಕ್ ಆಗಿದ್ದಾಳೆ.
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಉಂಡಿ ಮಂಡಲದ ಯಂಡಗಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯಂಡಗಂಡಿ ಎಂಬ ಗ್ರಾಮದ ಮಹಿಳೆ ನಾಗ ತುಳಸಿ ಎಂಬಾಕೆ ತನ್ನ ಮನೆ ನಿರ್ಮಾಣ ಮಾಡಲು ಹಣಕಾಸಿನ ನೆರವು ಕೋರಿ ಕ್ಷತ್ರಿಯ ಸೇವಾ ಸಮಿತಿಯನ್ನು ಆಶ್ರಯಿಸಿದ್ದರು. ಆಕೆಯ ಮನವಿಯ ಮೇಲೆ ಸಮಿತಿ ಆಕೆಗೆ ಟೈಲ್ಸ್ ಕಳುಹಿಸಿಕೊಟ್ಟಿತ್ತು. ಬಳಿಕ ಆಕೆ ಮತ್ತೆ ಹೆಚ್ಚಿನ ಸಹಾಯವನ್ನು ಕೋರಿದ್ದರು. ಆಕೆಗೆ ವಿದ್ಯುತ್ ಉಪಕರಣಗಳನ್ನು ನೀಡುವ ಭರವಸೆ ನೀಡಿತ್ತು. ಈ ಕುರಿತು ವಾಟ್ಸಾಪ್ ಮೂಲಕ ಲೈಟ್ ಗಳು, ಫ್ಯಾನ್ ಹಾಗೂ ಸ್ವಿಚ್ ಗಳಂತಹ ವಸ್ತುಗಳನ್ನು ಕಳುಹಿಸುವುದಾಗಿ ಕ್ಷತ್ರೀಯ ಸಮಿತಿ ಸಂದೇಶ ಕಳುಹಿಸಿತ್ತು.
ನಂತರ ಗುರುವಾರ ರಾತ್ರಿ ಮಹಿಳೆಯ ಮನೆಗೆ ಪಾರ್ಸಲ್ ಒಂದು ಬಂದಿದೆ. ಈ ಪಾರ್ಸಲ್ ನಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಇರಬಹುದು ಎಂದು ಮಹಿಳೆ ಪಾರ್ಸಲ್ ಓಪೆನ್ ಮಾಡಿ ನೋಡಿದ್ದಾರೆ. ಪಾರ್ಸಲ್ ನೋಡುತ್ತಿದ್ದಂತೆ ಮಹಿಳೆ ಶಾಕ್ ಆಗಿದ್ದಾರೆ. ಪಾರ್ಸಲ್ ನಲ್ಲಿ ವಿದ್ಯುತ್ ಉಪಕರಣಗಳ ಬದಲಿಗೆ ವ್ಯಕ್ತಿಯೊಬ್ಬರ ಮೃತ ದೇಹವಿತ್ತು. ಭಯಭೀತಗೊಂಡ ಮಹಿಳೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಪೊಲೀಸ್ ತಂಡವೊಂದು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ.
ಇನ್ನೂ ಪೊಲೀಸರ ತನಿಖೆಯ ವೇಳೆ ಪಾರ್ಸೆಲ್‌ನಲ್ಲಿ 1.30 ಕೋಟಿ ರೂಪಾಯಿ ಹಣ ನೀಡುವಂತೆ ಬರೆದಿರುವ ಪತ್ರವೊಂದು ಸಿಕ್ಕಿದೆ. ಅಲ್ಲದೆ, ಈ ಕುಟುಂಬವು ಹಣವನ್ನು ಪಾವತಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ. ಪಾರ್ಸೆಲ್ ತಲುಪಿಸಿದವರ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಈ ಸಂಬಂಧ ಕ್ಷತ್ರಿಯ ಸೇವಾ ಸಮಿತಿಯ ಪ್ರತಿನಿಧಿಗಳಿಗೂ ಸಮನ್ಸ್ ಕಳುಹಿಸಲಾಗಿದೆ. ಮೃತದೇಹ ಸುಮಾರು 45 ವರ್ಷದ ವ್ಯಕ್ತಿಯದ್ದು ಇರಬಹುದು ಎಂದು ಅಂದಾಜಿಸಲಾಗಿದ್ದು, ನಾಲ್ಕೈದು ದಿನಗಳ ಹಿಂದೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.