Amit Shah – ಇತ್ತಿಚಿಗಷ್ಟೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಡಾ.ಬಿ.ಆರ್ ಅಂಬೇಡ್ಕರ್ ರವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದು, ಈ ಸಂಬಂಧ ಅವರನ್ನು ಕೂಡಲೇ ವಜಾಗೊಳಿಸಬೇಕೆಂದು ಆಗ್ರಹಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ದಲಿತಪರ ಸಂಘಟನೆಗಳು ಹಾಗೂ ಕಾಂಗ್ರೇಸ್ ಮುಖಂಡರು ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು.
ಈ ವೇಳೆ ಜೀವಿಕ ಸಂಘಟನೆಯ ಜಿಲ್ಲಾ ಸಂಚಾಲಕ ಡಾ.ನಾರಾಯಣಸ್ವಾಮಿ ಮಾತನಾಡಿ, ಇಂದು ಅಂಬೇಡ್ಕರ್ ರವರು ಕೊಟ್ಟಿರುವಂತಹ ಸಂವಿಧಾನದಿಂದ ದೇಶ ಸುಭದ್ರವಾಗಿದೆ. ಆದರೆ ಕೆಲವರು ಮಾತ್ರ ಅಂಬೇಡ್ಕರ್ ಸಂವಿಧಾನವನ್ನೇ ತಿದ್ದುಪಡಿ ಮಾಡುತ್ತೇವೆಂದು ಮಾತನಾಡುತ್ತಾರೆ. ಇತ್ತೀಚಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ರವರು ಸಂವಿಧಾನದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅಂಬೇಡ್ಕರ್ ರವರ ಸಂವಿಧಾನ ಇಲ್ಲದಿದ್ದರೇ ಇಂದು ನೀವು ಗುಜರಿ ವ್ಯಾಪಾರ ಮಾಡಿಕೊಂಡು ಇರಬೇಕಾಗಿತ್ತು. ಅವರು ರಚಿಸಿಕೊಟ್ಟ ಸಂವಿಧಾನದಿಂದಲೇ ನೀವು ಗೃಹ ಸಚಿವರಾಗಿರುವುದು. ಅವರಿಂದ ಗೃಹ ಮಂತ್ರಿ ಸ್ಥಾನ ಪಡೆದುಕೊಂಡು ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಕೂಡಲೇ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಗೊಳಿಸಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ನಂತರ ಯೂತ್ ಕಾಂಗ್ರೇಸ್ ನ ರಾಜ್ಯ ಕಾರ್ಯದರ್ಶಿ ಬಾಲೇನಹಳ್ಳಿ ರಮೇಶ್ ಮಾತನಾಡಿ, ಸಂವಿಧಾನದಿಂದ ಉನ್ನತ ಹುದ್ದೆ ಪಡೆದು ಇಂದು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಕುರಿತು ತುಚ್ಛವಾಗಿ ಮಾತನಾಡಿರುವ ಅಮಿತ್ ಷಾ (Amit Shah) ರವರನ್ನು ವಜಾಗೊಳಿಸಬೇಕು. ಸಂವಿಧಾನದಿಂದ ಉನ್ನತ ಹುದ್ದೆಗಳನ್ನು ಪಡೆದುಕೊಂಡು ಇದೀಗ ಅಂಬೇಡ್ಕರ್ ವಿರುದ್ದವೇ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ. ಶೀಘ್ರವೇ ಎನ್.ಡಿ.ಎ ಸರ್ಕಾರ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ರನ್ನು ಸಂಪುಟದಿಂದ ಕೈಬಿಡಬೇಕು ಜೊತೆಗೆ ಅವರ ವಿರುದ್ದ ಕಾನೂನಿನಂತೆ ಕ್ರಮ ವಹಿಸಿ ಶಿಕ್ಷೆ ನೀಡಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ದಲಿತಪರ ಸಂಘಟನೆಗಳ ಮುಖಂಡರಾದ ಎಲ್.ಎನ್.ಈಶ್ವರಪ್ಪ, ಕಡೇಹಳ್ಳಿ ಕದಿರಪ್ಪ, ಜೀವಿಕ ನಾರಾಯಣಸ್ವಾಮಿ, ರಮಣಪ್ಪ, ನಾರಾಯಣಪ್ಪ, ರಾಜು, ಚೆನ್ನರಾಯಪ್ಪ, ರಾಜು, ಇಸ್ಕೂಲಪ್ಪ, ಭಾವನ್ನ, ಸುಬ್ಬರಾಯಪ್ಪ, ಕಾಂಗ್ರೇಸ್ ಮುಖಂಡರಾದ ದಪ್ಪರ್ತಿ ನಂಜುಂಡ, ನವೀನ್ ಸೇರಿದಂತೆ ಹಲವರು ಇದ್ದರು.