Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಆದಿನಾರಾಯಣರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಚೌಡಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ನಾಗರಾಜ್ ತಿಳಿಸಿದರು.
ಚುನಾವಣೆ ದಿನಾಂಕದಿಂದ ಮುಂದಿನ 5 ವರ್ಷಗಳ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆದಿನಾರಾಯಣರೆಡ್ಡಿ, ಉಪಾಧ್ಯಕ್ಷ ಸ್ಥಾನಕ್ಕೆ ಚೌಡಪ್ಪ ಮಾತ್ರ ನಾಮ ಪತ್ರ ಸಲ್ಲಿಸಿದ್ದು, ಬೇರೆ ಯಾವುದೇ ನಾಮಪತ್ರಗಳು ಸಲ್ಲಿಸದ ಕಾರಣ ಅವರ ನಾಮಪತ್ರಗಳನ್ನು ಪರಿಶೀಲಿಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು.
ಈ ವೇಳೆ ಗ್ರಾಮದ ಹಿರಿಯ ಮುಖಂಡ ಅಶ್ವತ್ಥಪ್ಪ ಮಾತನಾಡಿ, ಸಂಘದ ಅಭಿವೃದ್ಧಿ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ಬೆಂಬಲಿತರಾಗಿ ಆದಿನಾರಾಯಣರೆಡ್ಡಿಯನ್ನು ಅಧ್ಯಕ್ಷರನ್ನಾಗಿ ಹಾಗೂ ಸಿಪಿಎಂ ಬೆಂಬಲಿತ ಅಭ್ಯರ್ಥಿಯಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಚೌಡಪ್ಪ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ, ನಮ್ಮ ಮುಖ್ಯ ಉದ್ದೇಶ ಸಂಘದ ಅಭಿವೃದ್ಧಿ ಆದ್ದರಿಂದ ಎರಡು ಪಕ್ಷದ ಮುಖಂಡರು ಸೇರಿ ಪಕ್ಷಾತೀತವಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆಂದು ತಿಳಿಸಿದರು.
ನಂತರ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಆದಿನಾರಾಯಣರೆಡ್ಡಿ ಮಾತನಾಡಿ, ನಾನು ಕಳೆದ ಹಲವು ವರ್ಷಗಳಿಂದ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದು, ಪಕ್ಷಾತೀತವಾಗಿ ನನ್ನನ್ನು ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರಿಗೂ ಧನ್ಯವಾದಗಳನ್ನು ತಿಳಿಸುತ್ತಾ, ಮುಂದಿನ ದಿನಗಳಲ್ಲಿ ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಇನ್ನಷ್ಟು ಅಭಿವೃದ್ಧಿ ಮಾಡಿ ರೈತರಿಗೆ ಒಕ್ಕೂಟದಿಂದ ಸಿಗಬಹುದಾದ ಎಲ್ಲಾ ಸವಲತ್ತುಗಳನ್ನು ತಲುಪಿಸುವ ಕೆಲಸ ಮಾಡುತ್ತೇನೆಂದು ತಿಳಿಸಿದರು.
ಈ ವೇಳೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ನಿರ್ದೇಶಕರಾದ ಎಸ್.ವಿ.ಆದಿನಾರಾಯಣಪ್ಪ, ತಿಮ್ಮಪ್ಪ, ಬಾಲಕೃಷ್ಣ, ನಾರಾಯಣಸ್ವಾಮಿ, ರವಿ, ವೇಣು, ನರಸಮ್ಮ, ಆದಿನಾರಾಯಣಪ್ಪ, ಕೃಷ್ಣಪ್ಪ, ನಂಜಮ್ಮ, ಲಕ್ಷ್ಮೀದೇವಮ್ಮ ಹಾಗೂ ಮುಖಂಡರಾದ ಅಶ್ವತ್ಥಪ್ಪ, ಜಿ.ಲಕ್ಷ್ಮೀನಾರಾಯಣ, ಶಂಕರ್, ಗಂಗರಾಜು, ರಾಮಕೃಷ್ಣ, ನರಸಿಂಹಮೂರ್ತಿ, ಶ್ರೀನಿವಾಸ, ರಾಮಮೂರ್ತಿ ಸೇರಿ ಇತರರು ಅಭಿನಂಧಿಸಿದರು.