SSLC Exam- 2024-25ನೇ ಸಾಲಿನಲ್ಲಿ ರಾಜ್ಯಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಲು ಎಲ್ಲಾ ಇಲಾಖೆಗಳು, ನೋಡಲ್ ಅಧಿಕಾರಿಗಳು, ಶಾಲೆಗಳ ಮುಖ್ಯಶಿಕ್ಷಕರು ಸೇರಿದಂತೆ ಎಲ್ಲಾ ಶಿಕ್ಷಕರು ಶ್ರಮ ವಹಿಸಬೇಕೆಂದು ತಹಸೀಲ್ದಾರ್ ಸಿಗ್ಬತ್ತುಲ್ಲಾ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲೆಗಳ ಮುಖ್ಯಶಿಕ್ಷಕರುಗಳ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಕಳೆದೆರಡು ವರ್ಷಗಳ ಹಿಂದೆ ಇಡೀ ರಾಜ್ಯಕ್ಕೆ ಗುಡಿಬಂಡೆ ತಾಲೂಕು ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ಅದೇ ರೀತಿ ಈ ಬಾರಿಯೂ ರಾಜ್ಯಕ್ಕೆ ಪ್ರಥಮ ಬರಲು ಎಲ್ಲರೂ ಶ್ರಮಿಸಬೇಕು. ಈಗಾಗಲೇ ಜಿಲ್ಲಾಧಿಕಾರಿಗಳು ತಾಲೂಕಿನ ಪ್ರೌಢಶಾಲೆಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ನೋಡಲ್ ಅಧಿಕಾರಿಗಳಿಗೆ ಪ್ರೌಢಶಾಲೆಗಳ ಮುಖ್ಯಸ್ಥರು ಸಹಕಾರ ನೀಡಬೇಕು. ಅದೇ ರೀತಿ ನೋಡಲ್ ಅಧಿಕಾರಿಗಳೂ ಸಹ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಜೊತೆಗೆ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಪೋಷಕರೂ ಸಹ ಮಕ್ಕಳಿಗೆ ಈ ಸಮಯದಲ್ಲಿ ಮೊಬೈಲ್ ಗಳನ್ನು ನೀಡಬಾರದು. ಅವರಿಗೆ ಓದುವಂತೆ ಸೂಕ್ತ ಮಾರ್ಗದರ್ಶನ ನೀಡಬೇಕು. ಶಿಕ್ಷಕರೊಂದಿಗೆ ತಮ್ಮ ಮಕ್ಕಳ ವಿದ್ಯಾಭ್ಯಾಸ ಹೇಗಿದೆ ಎಂಬ ಮಾಹಿತಿಯನ್ನು ಪಡೆದುಕೊಳ್ಳುತ್ತಿರಬೇಕು ಎಂದರು.
ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಮಾತನಾಡಿ, ಈ ಬಾರಿ ಗುಡಿಬಂಡೆ ತಾಲೂಕಿನಲ್ಲಿ ಉತ್ತಮ ಫಲಿತಾಂಶ ಗಳಿಸಲು ಇಲಾಖೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಇನ್ನೂ ಎಸ್.ಎಸ್.ಎಲ್.ಸಿ ಪರೀಕ್ಷೆ ದಿನಾಂಕ ಕಡಿಮೆ ಅವಧಿಯಲ್ಲಿಯೇ ಇದೆ. ಜಿಲ್ಲಾಧಿಕಾರಿಗಳು ನೋಡಲ್ ಅಧಿಕಾರಿಗಳನ್ನು ಸಹ ನೇಮಿಸಿದ್ದಾರೆ. ಆಯಾ ಪ್ರೌಢಶಾಲೆಗಳ ವ್ಯಾಫ್ತಿಯಲ್ಲಿ ವಾಟ್ಸಾಪ್ ಗ್ರೂಪ್ ಸಹ ರಚನೆ ಮಾಡಿ, ಅದರಲ್ಲಿ ವಿದ್ಯಾರ್ಥಿಗಳ ಪೋಷಕರನ್ನು ಸೇರಿಸಿ ಪರೀಕ್ಷೆಯ ಕುರಿತು ಮಾಹಿತಿ ನೀಡಲಾಗುತ್ತದೆ. ಈಗಾಗಲೇ ಮಕ್ಕಳ ಕಾರ್ಯಕ್ಷಮತೆಗೆ ಅನುಗುಣವಾಗಿ ವಿಭಾಗಗಳನ್ನು ಮಾಡಲಾಗಿದ್ದು, ಆಯಾ ವಿಭಾಗದ ಮಕ್ಕಳಿಗೆ ತಕ್ಕಂತೆ ಶಿಕ್ಷಣ ನೀಡುವ ಕೆಲಸ ಸಹ ನಡೆಯಲಿದೆ. ಜೊತೆಗೆ ಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ಸಹ ಆರಂಭಿಸಲಾಗಿದೆ. ಈ ಬಾರಿ ರಾಜ್ಯಕ್ಕೆ ಗುಡಿಬಂಡೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು.
ಈ ಸಮಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ನೋಡಲ್ ಅಧಿಕಾರಿಗಳಾದ ಕೃಷಿ ಇಲಾಖೆಯ ಕೇಶವರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಲಕ್ಷ್ಮೀಪತಿರೆಡ್ಡಿ, ಶಿಶು ಅಭಿವೃದ್ದಿ ಅಧಿಕಾರಿ ರಫೀಕ್, ಪಶು ಇಲಾಖೆಯ ಸುಬ್ರಮಣ್ಯ, ಬಿಸಿಎಂ ಇಲಾಖೆಯ ಶಂಕರಪ್ಪ, ಬಿಇಒ ಇಲಾಖೆಯ ರಘು ಸೇರಿದಂತೆ ವಿವಿಧ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಹಾಜರಿದ್ದರು.