Farmer – ಫೆ.24 ರ ರಾತ್ರಿ ಸಮಯದಲ್ಲಿ ತಮ್ಮ ಜಮೀನಿನಲ್ಲಿ ಹಾಕಿದ್ದ ಆಲೂಗಡ್ಡೆ ಬೆಳೆಗೆ ನೀರು ಹಾಯಿಸಲು ಹೋದ ರೈತನೋರ್ವ ವಿದ್ಯುತ್ ತಗುಲಿ ಧಾರುಣ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಜಂಗಾಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಕೃಷ್ಣಪ್ಪ (60) ಎಂದು ಗುರ್ತಿಸಲಾಗಿದೆ.

ಗುಡಿಬಂಡೆ ತಾಲೂಕಿನ ಜಂಗಾಲಹಳ್ಳಿ ಗ್ರಾಮದ ನಿವಾಸಿ ಕೃಷ್ಣಪ್ಪ ಎಂಬುವವರು ತಮ್ಮ 1 ಎಕರೆ ಜಮೀನಿನಲ್ಲಿ ಆಲೂಗಡ್ಡೆ ಬೆಳೆ ಇಟ್ಟಿದ್ದ. ರಾತ್ರಿ ಸಮಯದಲ್ಲಿ ವಿದ್ಯುತ್ ಬಂದಾಗ ನೀರು ಹಾಯಿಸಿ ಮನೆಗೆ ವಾಪಸ್ಸಾಗುತ್ತಿದ್ದ. ಮರುದಿನ ಮೇಕೆಗಳನ್ನು ಮೇಯಿಸಲು ಹೋಗುತ್ತಿದ್ದ. ಆದರೆ ನಿನ್ನೆ ರಾತ್ರಿ ಬೆಳೆಗೆ ನೀರು ಹಾಯಿಸಲು ಹೋದವ ವಾಪಸ್ಸು ಬಂದಿರಲಿಲ್ಲ. ಇನ್ನೂ ಮಂಗಳವಾರ ಮನೆಯಲ್ಲಿ ಕೃಷ್ಣಪ್ಪ ಕಾಣಿಸಲಿಲ್ಲ. ಜೊತೆಗೆ ಮೇಕೆಗಳು ಸಹ ಮೇವಿಲ್ಲದೇ ಕೂಗುತ್ತಿದ್ದು. ಇದನ್ನು ಕಂಡ ಅಕ್ಕಪಕ್ಕದವರು ಅನುಮಾನ ಬಂದು ಜಮೀನಿನ ಬಳಿ ಹೋಗಿ ನೋಡಿದಾಗ ವಿದ್ಯುತ್ ತಂತಿ ಮೇಲೆ ಬಿದ್ದು ಸುಟ್ಟು ಹೋಗಿರುವುದನ್ನು ಕಂಡಿದ್ದಾರೆ. ನಂತರ ಗುಡಿಬಂಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
ಸೋಮವಾರ ರಾತ್ರಿ ಆಲೂಗಡ್ಡೆ ಬೆಳೆಗೆ ನೀರು ಹಾಯಿಸಲು ಹೋಗಿದ್ದ ಸಮಯದಲ್ಲಿ ಕತ್ತಲಿರುವ ಕಾರಣ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಇನ್ನೂ ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. ಇತ್ತೀಚಿಗೆ ರೈತರ ಬೆಳೆಗಳಿಗೆ ರಾತ್ರಿ ಸಮಯದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಸಾಲ ಸೋಲ ಮಾಡಿ ರೈತರು ಬೆಳೆಯನ್ನು ಇಟ್ಟಿರುತ್ತಾರೆ. ಆದರೆ ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಬೆಳೆ ನಾಶವಾಗುತ್ತಿದೆ. ಇದರ ಜೊತೆಗೆ ಈ ರೀತಿಯ ಘಟನೆಗಳು ನಡೆದರೇ ಯಾವ ರೀತಿ ರೈತರು ಬದುಕುಬೇಕು ಎಂಬ ನೋವನ್ನು ಅನೇಕ ರೈತರು ವ್ಯಕ್ತಪಡಿಸುತ್ತಿದ್ದಾರೆ.