Finance Problems – ರಾಜ್ಯದಲ್ಲಿ ಕೆಲವು ದಿನಗಳಿಂದ ಸಾಲಭಾದೆ ತಾಳಲಾರದೆ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಫೈನಾನ್ಸ್ ಕಂಪನಿಗಳು ಬಲವಂತವಾಗಿ ಸಾಲ ವಸೂಲಿ ಮಾಡಬಾರದೆಂದು ಹೊಸ ಕಾಯ್ದೆ ಸಹ ಜಾರಿಯಾಗಿದೆ. ಆದರೂ ಸಹ ಆತ್ಮಹತ್ಯೆಗಳು ಮಾತ್ರ ನಿಲ್ಲುತ್ತಿಲ್ಲ. ಇದೀಗ ಮಂಡ್ಯದಲ್ಲಿ ಒಂದೇ ಕುಟುಂಬದ ಮೂರು ಮಂದಿ ವಿಷ ಸೇವಿಸಿ, ಬಳಿಕ ವಿಸಿ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕೆಲವು ದಿನಗಳ ಹಿಂದೆಯಷ್ಟೆ ಮೈಸೂರಿನ ವಿಶ್ವೇಶ್ವರಯ್ಯ ನಗರದ ಅಪಾರ್ಟ್ ಮೆಂಟ್ ನಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಮೃತಪಟ್ಟಿದ್ದರು. ಸಾಲಭಾದೆ ತಾಳಲಾರದೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಲಾಗಿತ್ತು. ಮೃತ ದುರ್ದೈವಿಗಳನ್ನು ಮಾಸ್ತಪ್ಪ, ರತ್ನಮ್ಮ ಹಾಗೂ ಲಕ್ಷ್ಮೀ ಎಂದು ಗುರ್ತಿಸಲಾಗಿತ್ತು. ಮಾಸ್ತಪ್ಪ ಹಾಗೂ ರತ್ನಮ್ಮ ಮೃತ ದೇಹ ಪತ್ತೆಯಾಗಿದ್ದು, ಅವರ ಪುತ್ರಿ ಲಕ್ಷ್ಮೀ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.
ಇನ್ನೂ ಮೃತರು ಶ್ರೀರಂಗಪಟ್ಟಣದ ಗಂಜಾಂ ನಿವಾಸಿಗಳಾಗಿದ್ದು, ಮಾಸ್ತಪ್ಪ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಮಾಸ್ತಪ್ಪ ಸುಮಾರು 3 ಲಕ್ಷ ರೂಪಾಯಿ ಕೈಸಾಲ ಮಾಡಿಕೊಂಡಿದ್ದರು. 3 ಲಕ್ಷ ರೂ. ಕೈಸಾಲ ಸೇರಿದಂತೆ ಸುಮಾರು 12 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ಮಾಸ್ತಪ್ಪ, ಸಾಲಗಾರರ ಕಾಟದಿಂದ ಮನೆ ಮಾರಾಟ ಮಾಡಲೂ ಮುಂದಾಗಿದ್ದರು. ಇನ್ನೂ ಸಾಲ ಕೊಟ್ಟವರು ಮನೆಯ ಬಳಿ ಬಂದು ಗಲಾಟೆ ಮಾಡಿದ್ದರಂತೆ. ಈ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಮಾಸ್ತಪ್ಪ, ರತ್ನಮ್ಮ ಹಾಗೂ ಲಕ್ಷ್ಮೀ ಮೂರು ಮಂದಿ ಶ್ರೀರಂಗಪಟ್ಟಣದ ಗಂಜಾಂನಿಂದ ಆಟೋದಲ್ಲಿ ಬಂದು ಚಂದಗಾಲು ಬಳಿ ನಾಲೆ ಏರಿ ಮೇಲೆ ಆಟೋ ನಿಲ್ಲಿಸಿದ್ದರಂತೆ. ಮೊದಲಿಗೆ ದಂಪತಿ ಹಾಗೂ ಮಗಳು ವಿಷ ಸೇವನೆ ಮಾಡಿದ್ದಾರೆ. ನಂತರ ವಿ.ಸಿ. ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.