Scientific Exhibition – ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಹಾಗೂ ಪ್ರತಿಭೆಯನ್ನು ಹೊರತರಲು ವಿಜ್ಞಾನ ವಸ್ತು ಪ್ರದರ್ಶನದಂತಹ ಕಾರ್ಯಕ್ರಮಗಳು ತುಂಬಾ ಸಹಕಾರಿಯಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಎಂದು ನಿವೃತ್ತ ಉಪನ್ಯಾಸಕ ಬಿ.ಅಮೀರ್ ಜಾನ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಶ್ರೀ ಸಾಯಿ ವಿದ್ಯಾನಿಕೇತನ ಶಾಲೆಯಲ್ಲಿ ಸಿ.ವಿ.ರಾಮನ್ ರವರ ಸ್ಮರಣಾರ್ಥ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿಜ್ಞಾನ ಹಾಗೂ ಕಲಾ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಬದುಕಿನಲ್ಲಿ ವಿಜ್ಞಾನವು ಒಂದಲ್ಲ ಒಂದು ವಿಷಯಗಳನ್ನು ಒಳಗೊಂಡಿದ್ದು, ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳಿಗೆ ವಿಜ್ಞಾನ ಕ್ಷೇತ್ರದತ್ತ ಆಸಕ್ತಿ ಮೂಡಿಸಲು ಹೆಚ್ಚಿನ ಉತ್ತೇಜನ ನೀಡಬೇಕು. ವಿದ್ಯಾರ್ಥಿಗಳು ವೈಜ್ಞಾನಿಕ ವಿಚಾರಗಳನ್ನು ತಿಳಿದುಕೊಳ್ಳಲು ವಿಜ್ಞಾನ ಸಂಬಂಧ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕು. ಗುರು ಹಿರಿಯರಿಗೆ ಗೌರವ ಕೊಡುವುದನ್ನು ರೂಢಿಸಿಕೊಳ್ಳಬೇಕು. ವಿಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ವಿಜ್ಞಾನಿಗಳನ್ನು ಸ್ಮರಿಸಿಕೊಳ್ಳಬೇಕು. ಮೂಢನಂಬಿಕೆ ತೊಲಗಿಸಿ ವೈಜ್ಞಾನಿಕ ಸಮಾಜ ಕಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಪ್ರಮುಖ. ಮೂಲ ವಿಜ್ಞಾನ ಕಲಿಕೆ ಕಡೆ ಪ್ರತಿಯೊಬ್ಬರು ಆಸಕ್ತಿ ವಹಿಸಬೇಕು ಎಂದರು.

ಬಳಿಕ ಸಾಯಿ ವಿದ್ಯಾನಿಕೇತನ ಶಾಲೆಯ ಮುಖ್ಯಸ್ಥ ರಾಮಾಂಜಿನೇಯ ಮಾತನಾಡಿ, ಜೀವನದಲ್ಲಿ ವಿಜ್ಞಾನದ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಮೊದಲ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಸಿ.ವಿ.ರಾಮನ್ ಅವರು ರಾಮನ್ ಪರಿಣಾಮ ಸಿದ್ದಾಂತವನ್ನು ಪ್ರತಿಪಾದಿಸಿದ ಪ್ರಯುಕ್ತ ಪ್ರತಿ ವರ್ಷ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವೈಜ್ಞಾನಿಕತೆ ಎಂಬುದು ಇರುತ್ತದೆ. ಅದನ್ನು ಹೊರತೆಗೆಯುವ ನಿಟ್ಟಿನಲ್ಲಿ ಶ್ರಮ ವಹಿಸಬೇಕು. ಶಿಕ್ಷಕರು ಹಾಗೂ ಪೋಷಕರೂ ಸಹ ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರ್ತಿಸಬೇಕು. ವಿದ್ಯಾರ್ಥಿಗಳಲ್ಲಿ ಮನೆ, ಮನ ಪ್ರಯೋಗ ಶಾಲೆಯಾದಾಗ ಮಾತ್ರ ಭವಿಷ್ಯದಲ್ಲಿ ವಿಜ್ಞಾನಿಯಾಗಲು ಸಾಧ್ಯ, ಇದಕ್ಕೆ ವಿದ್ಯಾರ್ಥಿಗಳ ಕಠಿಣ ಶ್ರಮ ಅಗತ್ಯ ಎಂದರು.
ಈ ವೇಳೆ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕೆ.ಸಿ.ಮಂಜುನಾಥ್ ವಿದ್ಯಾರ್ಥಿಗಳಿಗೆ ವಿಜ್ಞಾನದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಿದರು. ಇನ್ನೂ ವಸ್ತು ಪ್ರದರ್ಶನದಲ್ಲಿ ಐತಿಹಾಸಿಕ ಸ್ಮಾರಕಗಳು, ವಿಜ್ಞಾನ ಮಾದರಿಗಳು, ಹಳ್ಳಿಯ ಸೊಬಗು, ಸೋಲಾರ್ ಮಾದರಿ, ನೀರಿನ ಮಿತಬಳಕೆ, ಪರಿಸರ ಮಾಲಿನ್ಯದ ದುಷ್ಪರಿಣಾಮಗಳು, ಪವನ ಶಕ್ತಿ, ದೇಹದ ವಿವಿಧ ಅಂಗಗಳ ರಚನೆ ಸೇರಿದಂತೆ ವಿವಿಧ ಮಾದರಿಗಳನ್ನು ತಯಾರಿಸಲಾಗಿತ್ತು. ಜೊತೆಗೆ ವಿದ್ಯಾರ್ಥಿಗಳು ತಯಾರಿಸಿದ್ದಂತಹ ಮಾದರಿಗಳ ಬಗ್ಗೆ ವಿದ್ಯಾರ್ಥಿಗಳು ವೀಕ್ಷಕರಿಗೆ ಸಂಪೂರ್ಣವಾಗಿ ವಿವರಿಸಲಾಯಿತು.

ಈ ವೇಳೆ ಶ್ರೀ ಸಾಯಿ ವಿದ್ಯಾನಿಕೇತನ್ ಶಾಲೆಯ ಮುಖ್ಯ ಶಿಕ್ಷಕಿ ಗೀತಾ, ಸಹಶಿಕ್ಷಕ ಅರ್ಜುನ್, ಸಹಶಿಕ್ಷಕಿಯರಾದ ದಿವ್ಯ, ಪದ್ಮ, ರಾಧ, ತಹಸಿನಾ, ನಯಿಮಾ, ನಗೀನಾ, ಪಲ್ಲವಿ, ಸುಧಾ, ಲಕ್ಷ್ಮಿ, ತಸ್ದೀನ್, ಶಾರದ ದೈಹಿಕ ಶಿಕ್ಷಕ ನಾರಾಯಣಸ್ವಾಮಿ, ಸಿಬ್ಬಂದಿ ಅಶ್ವತ್ಥಮ್ಮ ಸೇರಿದಂತೆ ಹಲವರು ಇದ್ದರು.