ಕರ್ನಾಟಕ ರಾಜ್ಯದಲ್ಲಿ ಆಗಾಗ ದಲಿತ ಸಿಎಂ ಕೂಗು ಕೇಳಿಬರುತ್ತಲೇ ಇರುತ್ತದೆ. ಇದೀಗ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಒಂದು ವೇಳೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸಂದರ್ಭ ಬಂದರೇ, ದಲಿತ ಸಿಎಂ ಮಾಡಬೇಕೆಂಬ ಚರ್ಚೆ ನಡೆಯುತ್ತಿದೆ. ಈ ನಡುವೆ ದಲಿತ ನಾಯಕರು ಸಭೆಗಳ ಮೇಲೆ ಸಭೆಗಳು ನಡೆಸುತ್ತಿದ್ದಾರೆ. ನಾಯಕರ ಸರಣಿ ಸಭೆಗಳು ಸಿಎಂ ಬದಲಾವಣೆಯ ಸುಳಿವು ಕೊಡುತ್ತಿವೆ. ಸಚಿವರು ಒಬ್ಬರಾದ ಮೇಲೊಬ್ಬರಂತೆ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರನ್ನು ಭೇಟಿ ಮಾಡುತ್ತಾ ಮತಷ್ಟು ಕುತೂಹಲ ಮೂಡುವಂತೆ ಮಾಡುತ್ತಿದ್ದಾರೆ. ಈ ನಡುವೆ ದಲಿತ ಸಿಎಂ ಕೂಗಿನಲ್ಲಿ ಸತೀಶ್ ಜಾರಕಿಹೊಳಿ ಯವರ ಹೆಸರು ಮುಂಚೂಣಿಯಲ್ಲಿದೆ ಎಂದು ಹೇಳಲಾಗುತ್ತಿದೆ.

ಸಿಎಂ ಸಿದ್ದರಾಮಯ್ಯನವರ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ದಿನೇ ದಿನೇ ತಿರುವು ಪಡೆದುಕೊಳ್ಳುತ್ತಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸಮಯ ಬಂದರೇ, ಅಹಿಂದ ಸಮುದಾಯದ ನಾಯಕರೇ ಮುಂದಿನ ಸಿಎಂ ಆಗಬೇಕೆಂಬ ಕೂಗು ಕೇಳಿಬರುತ್ತಿದೆ. ಈ ಪೈಕಿ ಬೆಳಗಾವಿ ಸಾಹುಕಾರ ಸಚಿವ ಸತೀಸ್ ಜಾರಕಿಹೊಳಿ (Satish Jarkiholi) ಹೆಸರು ಮಂಚೂಣಿಯಲ್ಲಿದೆ. ಮುಡಾ ಹಗರಣ ಕೇಳಿಬಂದಾಗಿನಿಂದ ರಾಜ್ಯದಲ್ಲಿ ಸಿಎಂ ಬದಲಾವಣೆಯ ಕೂಗು ಜೋರಾಗಿಯೇ ಕೇಳಿಬರುತ್ತಿದೆ. ಆಗ ಕೇಳಿಬಂದ ಹೆಸರುಗಳ ಪೈಕಿ ಡಿಸಿಎಂ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ ರವರುಗಳು ಹೆಸರುಗಳು ಕೇಳಿಬಂದವು. ಇದೀಗ ದಲಿತ ಸಿಎಂ ಕೂಗು ಜೋರಾಗಿ ಕೇಳಿಬರುತ್ತಿದೆ.

ಕೆಲವು ದಿನಗಳ ಹಿಂದೆಯಷ್ಟೆ ಸತೀಶ್ ಜಾರಕಿಹೊಳಿ ಪರ ಅಭಿಮಾನಿಗಳು ಮುಂದಿನ ಸಿಎಂ ಜಾರಕಿಹೊಳಿ ಎಂಬ ಅಭಿಯಾನ ಸಹ ನಡೆಸಿದ್ದರು. ನಿನ್ನೆ ತುಮಕೂರಿನಲ್ಲಿ ನಡೆದ ದಲಿತ ಸಂಘರ್ಷ ಸಮಿತಿ ಕಾರ್ಯಕ್ರಮದಲ್ಲೂ ಸಹ ದಲಿತ ಮುಖಂಡರೊಬ್ಬರು ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂಬ ಘೊಷಣೆಯನ್ನು ಕೂಗಿದರು. ಜೊತೆಗೆ ಸರಣಿಯಾಗಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರನ್ನು ಭೇಟಿಯಾಗಿ ಸಭೆ ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರ್ತಿಸಿಕೊಂಡ ಸತೀಶ್ ಜಾರಕಿಹೊಳಿ ರವರನ್ನೆ ಮುಂದಿನ ಸಿಎಂ ಮಾಡಬಹುದು ಎಂಬ ಮಾತುಗಳೂ ಸಹ ಬಲವಾಗಿ ಕೇಳಿಬರುತ್ತಿವೆ.

ಇನ್ನೂ ಈ ಸುದ್ದಿ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಸಚಿವ ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಇಂದು ಸಹ ಊಟದ ನೆಪದಲ್ಲಿ ಚರ್ಚೆ ನಡೆಸಿದ್ದಾರೆ. ಆದರೆ ರಾಜಕೀಯದ ಬಗ್ಗೆ ಚರ್ಚೆಯಾಗಿಲ್ಲ ಅಂತಾ ಚರ್ಚೆಯನ್ನು ತಳ್ಳಿಹಾಕಿದ್ದಾರೆ. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಚಿವ ಸತೀಶ್ ಜಾರಕಿಹೊಳಿ ರವರನ್ನು ಭೇಟಿಯಾಗಿದ್ದಾರೆ. ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿಯಿರುವ ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಆದರೆ ಅಭಿವೃದ್ದಿ ವಿಚಾರಕ್ಕೆ ಸಂಬಂಧಿಸಿದಂತೆ ಭೇಟಿಯಾಗಿದ್ದೇನೆ ವಿನಃ ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಳಿಕ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಸಹ ಸತೀಶ್ ಜಾರಕಿಹೊಳಿಯವರನ್ನು ಭೇಟಿಯಾಗಿದ್ದು, ಸತೀಶ್ ಜಾರಕಿಹೊಳಿ ಮನೆ ಪವರ್ ಸೆಂಟರ್ ಆದಂತಿದೆ.