China Virus – ಚೀನಾದಲ್ಲಿ ಕಂಡು ಬಂದಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ (HMPV) ಕುರಿತು ಜೋರಾಗಿ ಸುದ್ದಿಯಾಗುತ್ತಿದ್ದು, ಈ ಕುರಿತು ಜನರು ಭಯ ಪಡುವ ಅವಶ್ಯಕತೆಯಿಲ್ಲ. ಭಯಪಡುವ ಬದಲಿಗೆ ಮುಂಜಾಗೃತಾ ಕ್ರಮಗಳನ್ನು ಅಗತ್ಯವಾಗಿ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ಸಲಹೆ ನೀಡಿದೆ. ಇದೇ ವೇಳೆ ಭಾರತದಲ್ಲಿ ಇಲ್ಲಿವರೆಗೂ ಯಾವುದೇ ಸೋಂಕು ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದೆ.
ಈ ಕುರಿತು ಶುಕ್ರವಾರ ಮಾದ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ.ಅತುಲ್ ಗೋಯಲ್ ಚೀನಾದಲ್ಲಿ ಹೆಚ್ಎಂಪಿವಿ ವೈರಸ್ ಹರಡುತ್ತಿರುವ ಬಗ್ಗೆ ಭಾರತದ ಆರೋಗ್ಯ ಇಲಾಖೆ ಪ್ರತಿಕ್ರಿಯೆ ನೀಡಿದೆ. ಭಾರತದಲ್ಲಿ ಜನರು ಆತಂಕಪಡುವ ಅಗತ್ಯವಿಲ್ಲ, ಉಸಿರಾಟದ ಸಮಸ್ಯೆಗಳ ಬಗ್ಗೆ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮರೆಯಬೇಡಿ. HMPV ಇತರ ಉಸಿರಾಟದ ವೈರಸ್ ಗಳಂತೆ ಸಾಮಾನ್ಯ ಶೀತವನ್ನು ಉಂಟುಮಾಡುತ್ತದೆ. ಹೆಚ್ಚಾಗಿ ಈ ವೈರಸ್ ಮಕ್ಕಳು ಮತ್ತು ವಯಸ್ಸಾದವರಿಗೆ ಕಾಡಲಿದೆ. ಆದರೆ ಯಾರೂ ಹೆದರುವ ಅಗತ್ಯವಿಲ್ಲ. ಉಸಿರಾಟದ ಸೋಂಕುಗಳಿಗೆ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ಅನುಸರಿಸಿ, ಸೋಂಕು ಹರಡುವುದನ್ನು ತಡೆಯಲು ಇತರರೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಿದರೆ ಉತ್ತಮ ಎಂದು ಸಲಹೆ ನೀಡಿದ್ದಾರೆ.
ನಾವು ದೇಶದಲ್ಲಿ ಉಸಿರಾಟಕ್ಕೆ ಸಂಬಂಧಿಸಿದಂತೆ ದಾಖಲಾದ ರೋಗಿಗಳ ಡೇಟಾವನ್ನು ವಿಶ್ಲೇಷಿಸಿದ್ದೇವೆ. ಡಿಸೆಂಬರ್ 2024ರ ಡೇಟಾದಲ್ಲಿ ಯಾವುದೇ ಗಣನೀಯ ಹೆಚ್ಚಳ ಕಂಡುಬಂದಿಲ್ಲ. ನಮ್ಮ ಯಾವುದೇ ಸಂಸ್ಥೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೇಸ್ ದಾಖಲಾದ ಬಗ್ಗೆ ವರದಿಯಾಗಿಲ್ಲ. ನೆಗಡಿ ಅಥವಾ ಜ್ವರಕ್ಕೆ ನಿತ್ಯ ಔಷಧ ಸೇವಿಸಿದರೆ ಸಾಕು. ಸದ್ಯದ ಪರಿಸ್ಥಿತಿಯಲ್ಲಿ ಆತಂಕ ಬೇಡ. ಚಳಿಗಾಲದಲ್ಲಿ ಉಸಿರಾಟದ ಸೋಂಕುಗಳು ಹೆಚ್ಚಾಗಿ ಉಲ್ಬಣವಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಆತಂಕ ಬೇಡ ಎಂದು ಡಾ ಗೋಯಲ್ ಹೇಳಿದರು.
ಇನ್ನೂ ಈ ಚೀನಾ ಹೊಸ ವೈರಸ್ ಭೀತಿನ ನಡುವೆ ಮಂಡ್ಯ ಕಾಂಗ್ರೇಸ್ ಶಾಸಕ ರವಿಗಣಿಗ ನಾಲ್ಕು ದಿನಗಳ ಚೀನಾ ಪ್ರವಾಸ ಮುಗಿಸಿ ನಿನ್ನೆಯಷ್ಟೆ ಹಾಂಗ್ ಕಾಂಗ್ ನಿಂದ ಭಾರತಕ್ಕೆ ವಾಪಸ್ಸಾಗಿದ್ದಾರೆ. ಹೊಸ ವೈರಸ್ ಕುರಿತು ಮಾತನಾಡಿರುವ ಶಾಸಕ ರವಿ ಗಣಿಗ ರವರು, ಚೀನಾದಲ್ಲಿ ಕೋವಿಡ್ ಮಾದರಿಯ ಹೊಸ ವೈರಸ್ ಬಂದಿರಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸರ್ ಇಡಲಾಗಿದೆ. ಎಲ್ಲಾ ಮಕ್ಕಳಿಗೆ ಟೆಸ್ಟ್ ಸೋಂಕಿನ ಟೆಸ್ಟ್ ನಡೀತಿದೆ. ಶೇಕಡಾ 80ರಷ್ಟು ಜನ ಮಾಸ್ಕ್ ಧರಿಸಿ ಓಡಾಡ್ತಿದ್ದಾರೆ. ಆದರೆ ಚೀನಾದಲ್ಲಿ ನಾವು ಕಂಡಂತೆ ಮಾಸ್ಕ್ ಕಡ್ಡಾಯ ನಿಯಮ ಜಾರಿಯಲ್ಲಿಲ್ಲ. ಅಲ್ಲಿನ ಸದ್ಯದ ಪರಿಸ್ಥಿತಿ ನೋಡಿದರೇ ಕೋವಿಡ್ ಮಾದರಿ ಹೊಸ ವೈರಸ್ ಬಂದಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.