Weather Update-ಭಾರತದಲ್ಲಿ ಚಳಿಗಾಲದ ಮಧ್ಯೆ ಮತ್ತೆ ಚಂಡಮಾರುತ ಎದುರಾಗುವ ಭೀತಿ ಉಂಟಾಗಿದೆ. ದೇಶದ ನಾಲ್ಕು ರಾಜ್ಯಗಳಲ್ಲಿ ಫೆಂಗಲ್ ಚಂಡಮಾರುತ ಉಂಟಾಗುವ ಸಾಧ್ಯತೆ ಇದ್ದು ಈ ಹಿನ್ನೆಲೆ ಕೆಲವು ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಕರ್ನಾಟಕದಲ್ಲೂ ಸಹ ಮಳೆಯ ಪ್ರಭಾವ ಹೆಚ್ಚಾಗಲಿದೆ ಎಂದು IMD ಮುನ್ಸೂಚನೆ ನೀಡಿದೆ. ಸಮುದ್ರ ಮಟ್ಟದಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದಿಂದಾಗಿ ಮುಂದಿನ ಕೆಲವು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನ.26ರ ಮಂಗಳವಾರ ತಮಿಳುನಾಡಿನ ಹಲವು ಭಾಗಗಳಲ್ಲಿ ಮಳೆ ಸುರಿದಿದ್ದು, ಇದಕ್ಕೆ ಕಾರಣ ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತ. ನವೆಂಬರ್ 27 ರಂದು ಅಂದರೇ ಇಂದು ಚಂಡಮಾರುತ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮಂಗಳವಾರ ಬೆಳಗ್ಗೆಯ 6 ಗಂಟೆಗಳಲ್ಲಿ ಪ್ರತಿ ಗಂಟೆಗೆ 12 ಕಿಮೀ ವೇಗದಲ್ಲಿ ಕೇಂದ್ರ ಸ್ಥಾನದಿಂದ ವಾಯುವ್ಯ ದಿಕ್ಕಿನತ್ತ ಚಲಿಸಿದೆ. ವಿಶೇಷವೆಂದರೆ ಈ ವಾಯುಭಾರ ಕುಸಿತ ಚಲಿಸುವಾಗಲೇ ತೀವ್ರಗೊಂಡಿದೆ ಎಂದು ಬೆಂಗಳೂರು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ನವೆಂಬರ್ 27 ರಂದು ಸಂಜೆ ಹೊತ್ತಿಗೆ ಸ್ಪಷ್ಟ ಚಂಡಮಾರುತ ಚಲನೆಯ ದಿಕ್ಕು ಬದಲಾಗಲಿದೆ. ಆಗ ಗಾಳಿಯ ವೇಗವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಹವಾಮಾನ ವೈಪರಿತ್ಯಗಳ ಕಾರಣದಿಂದಾಗಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಲ್ಲಿ ಡಿಸೆಂಬರ್ 4ರವರೆಗೆ ಭರ್ಜರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಮಗಳೂರು, ಹಾಸನ, ಕೊಡಗು ಇನ್ನಿತರ ಜಿಲ್ಲೆಗಳಲ್ಲಿ ಸಾಧಾರಣೆ ಭಾರೀ ಮಳೆ ಆಗಬಹದು ಎನ್ನಲಾಗಿದೆ. ಈ ವೇಳೆ ಉತ್ತರ ಕರ್ನಾಟಕದ ಕೆಲವು ಕಡೆಗಳಲ್ಲಿ ಚಳಿ ಪ್ರಮಾಣ ಇನ್ನಷ್ಟು ಹೆಚ್ಚಾಗಬಹುದು. ಅಲ್ಲಲ್ಲಿ ಹಗುರ ಮಳೆ ಆಗುವ ಸಾಧ್ಯತೆ ಇದೆ ಎಂಬ ಮುನ್ಸೂಚನೆಯನ್ನು IMD ನೀಡಿದೆ.