Tirupati – ಕಲಿಯುಗ ದೈವ ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರನ ದೇವಾಲಯದ ಮೇಲೆ ವಿಮಾನ ಹಾರಟ ನಿಷೇಧ ಮಾಡಲಾಗಿದೆ. ಆದರೆ ಇದೀಗ ವಿಮಾನ ಹಾರಾಡಿದ್ದು, ಇದಕ್ಕೆ ತಿಮ್ಮಪ್ಪನ ಭಕ್ತರು ಕೆಂಡಾಮಂಡಲವಾಗಿದ್ದಾರೆ. ಇತ್ತೀಚಿಗೆ ದೇವಾಲಯದ ಮೇಲೆ ಹಲವು ಬಾರಿ ವಿಮಾನಗಳು ಹಾರಾಡುತ್ತಿರುವುದನ್ನು ಗಮನಿಸಲಾಗಿದೆ. ಆದರೆ ಫೆ.21 ರಂದು ವಿಮಾನವೊಂದು ದೇವಾಲಯದ ಮೇಲೆ ತುಂಬಾ ಕಡಿಮೆ ಎತ್ತರದಲ್ಲಿ ಹಾರಾಡಿದ ಕಾರಣ ತಿಮ್ಮಪ್ಪನ ಭಕ್ತರು ಆಕ್ರೋಷ ಹೊರಹಾಕಿದ್ದಾರೆ.

ಕೋಟ್ಯಂತರ ಭಕ್ತರನ್ನು ಹೊಂದಿರುವ ಆಂಧ್ರಪ್ರದೇಶ ತಿರುಮಲದ ತಿಮ್ಮಪ್ಪನ ದೇವಾಲಯದ ಮೇಲೆ ಸಾಮಾನ್ಯವಾಗಿ ಯಾವುದೇ ವಿಮಾನಗಳು ಹಾರಾಡುವುದಿಲ್ಲ. ವಿಮಾನ ಹಾರಾಟವು ಆಗಮ ಶಾಸ್ತ್ರಕ್ಕೆ ವಿರುದ್ಧವಾದದ್ದು. ಹೀಗಾಗಿ ತಲ, ತಲಾಂತರಗಳಿಂದ ತಿಮ್ಮಪ್ಪನ ದೇಗುಲದ ಮೇಲೆ ವಿಮಾನ ಹಾರಾಡುವುದನ್ನ ಭಕ್ತರು ವಿರೋಧಿಸುತ್ತಾ ಬಂದಿದ್ದಾರೆ.ಆದರೆ, ನಿರಂತರವಾಗಿ ವಿಮಾನಗಳು ಹಾರುತ್ತಿರುವುದರಿಂದ ಭಕ್ತರು ತಿರುಪತಿಯನ್ನು ನೋ-ಫ್ಲೈ ಜೋನ್ ಆಗಿ ಘೋಷಿಸಲು ಆಗ್ರಹಿಸುತ್ತಿದ್ದಾರೆ.
ತಿರುಮಲ ಶ್ರೀವಾರಿ ದೇವಸ್ಥಾನದ ಮೇಲೆ ವಿಮಾನ ಸಂಚಾರ ದಿನನಿತ್ಯದ ಸಂಗತಿಯಾಗಿದೆ. ಕಳೆದ ಕೆಲವು ದಿನಗಳಿಂದ ತಿರುಮಲ ಬೆಟ್ಟದ ದೇವಾಲಯದ ಬಳಿ ವಿಮಾನಗಳು ಹಾರಾಡುತ್ತಿವೆ. ಈ ಸಂಬಂಧ TTD ನಾಗರೀಕ ವಿಮಾನಯಾನ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದೆ. ಆದರೆ ಇದನ್ನು ವಿಮಾನಯಾನ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ತಿಮ್ಮಪ್ಪನ ಭಕ್ತರು ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ಟಿಟಿಡಿ ಎಷ್ಟೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಭಕ್ತರು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.
ಕೇಂದ್ರ ಮೋದಿ ಸರ್ಕಾರದಲ್ಲಿ ಆಂಧ್ರದ ಟಿಡಿಪಿ ಪಕ್ಷದ ರಾಮ ಮೋಹನ್ ನಾಯ್ಡು ರವರು ಕೇಂದ್ರದ ನಾಗರಿಕ ವಿಮಾನಯಾನ ಖಾತೆ ಸಚಿವರಾಗಿದ್ದಾರೆ. ಹೀಗಾಗಿ ತಿರುಮಲವನ್ನು ಕೇಂದ್ರದ ನಾಗರಿಕ ವಿಮಾನಯಾನ ಇಲಾಖೆಯಿಂದ ವಿಮಾನ ಹಾರಾಟ ನಿಷೇಧಿತ ಪ್ರದೇಶ ಎಂದು ಘೋಷಿಸಲು ಒತ್ತಡ ಏರಲಾಗುತ್ತಿದೆ. ಜೊತೆಗೆ ಇತ್ತೀಚಿಗಷ್ಟೆ ತಿರುಮಲಕ್ಕೆ ಭೇಟಿ ನೀಡಿದ ರಾಜ್ಯ ಗೃಹ ಸಚಿವೆ ಅನಿತಾ ಈ ವಿಚಾರವನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಕುರಿತು ತನಿಖೆಗೆ ಆದೇಶ ಮಾಡಲಾಗಿದೆ. ವರದಿ ಬಂದ ಬಳಿಕ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಿ ತಿರುಮಲದ ದೇವಾಲಯದ ಮೇಲೆ ವಿಮಾನ ಹಾರಾದಂತೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.