Karaga Mahostava – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿ ಏಪ್ರಿಲ್ 03, 2025 ರಂದು ಬುಧವಾರ ರಾತ್ರಿ ಶ್ರೀ ಗಂಗಾಭವಾನಿ ಹೂವಿನ ಕರಗ ಮಹೋತ್ಸವ ಅತ್ಯಂತ ಭಕ್ತಿಭಾವ, ಸಂಭ್ರಮ ಮತ್ತು ಸಾಂಪ್ರದಾಯಿಕ ಆಚರಣೆಯೊಂದಿಗೆ ಜರುಗಿತು. ಈ ವರ್ಷದ ಕರಗ ಉತ್ಸವವು ಸ್ಥಳೀಯರಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೂ ಆಕರ್ಷಣೆಯ ಕೇಂದ್ರಬಿಂದುವಾಯಿತು. ಈ ಭವ್ಯ ಆಚರಣೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ, ಗ್ರಾಮ ದೇವತೆ ಗಂಗಾಭವಾನಿಯ ಆಶೀರ್ವಾದ ಪಡೆದರು.
Karaga Mahostava – ಅದ್ಧೂರಿ ಹೂವಿನ ಕರಗ ಮೆರವಣಿಗೆ
ಬುಧವಾರ ರಾತ್ರಿ 11:00 ಗಂಟೆಗೆ ಗಂಗಾಭವಾನಿ ದೇವಾಲಯದಿಂದ ಪ್ರಾರಂಭವಾದ ಹೂವಿನ ಕರಗ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಬೆಳಿಗ್ಗೆ 10:30ಕ್ಕೆ ದೇವಾಲಯಕ್ಕೆ ಮರಳಿತು. ಈ ಬಾರಿ ಕುಪಂನ ಮುನಿರತಂ ಬಾಲಾಜಿ ಅವರು ಆರನೇ ಬಾರಿಗೆ ಕರಗ ಹೊತ್ತು ಭಕ್ತರ ಕಣ್ಮಣಿಯಾಗಿ ಮೆರೆದರು
Karaga Mahostava – ವಿವಿಧ ದೇವಾಲಯಗಳ ಪಲ್ಲಕ್ಕಿ ಉತ್ಸವ
ಸೋಮೇನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ವಿವಿಧ ದೇವಾಲಯಗಳಾದ ಗಂಗಾಭವಾನಿ, ಶ್ರೀಲಕ್ಷ್ಮೀವೆಂಕರಮಣಸ್ವಾಮಿ, ಚಂದ್ರಮೌಳೇಶ್ವರ, ಆಂಜನೇಯ ಸಮೇತ ಕೋದಂಡರಾಮಸ್ವಾಮಿ, ಬೀರೇಶ್ವರ ಸ್ವಾಮಿ, ಚಿಕ್ಕನಂಚರ್ಲು ವರದಾಂಜನೇಯಸ್ವಾಮಿ, ಕಮ್ಮಡಿಕೆ ಬಯಲಾಂಜನೇಯಸ್ವಾಮಿ, ಜಂಬಿಗೇಮರದಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ, ಕನಿಕಲಮ್ಮ, ದಿನ್ನಹಳ್ಳಿನ ಪಾತಾಳೇಶ್ವರ, ಗಂಗಾನಹಳ್ಳಿ ಮುನೇಶ್ವರ, ನರಸಿಂಹಸ್ವಾಮಿ, ಗುಂಡ್ಲಹಳ್ಳಿ ಶನೇಶ್ವರಸ್ವಾಮಿ ಪಲ್ಲಕ್ಕಿ ಉತ್ಸವಗಳು ಕರಗಕ್ಕೆ ಮೆರಗು ನೀಡಿತ್ತು.
Karaga Mahostava – ಭಕ್ತರ ಸಹಭಾಗಿತ್ವ ಮತ್ತು ಭದ್ರತಾ ವ್ಯವಸ್ಥೆ
ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಮಂದಿ ಈ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ಕರಗದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ಪೌರಾಣಿಕ ನಾಟಕಗಳ ಪ್ರದರ್ಶನವೂ ಜರುಗಿತು. ಭಕ್ತರು ಶ್ರದ್ಧೆ ಹಾಗೂ ಭಕ್ತಿಭಾವದಿಂದ ಈ ಉತ್ಸವದಲ್ಲಿ ಪಾಲ್ಗೊಂಡರು. ಪೆರೇಸಂದ್ರ ಪೊಲೀಸ್ ಠಾಣೆಯು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತು ಒದಗಿಸಿತು. ಕರಗ ಉತ್ಸವದ ಸಂದರ್ಭದಲ್ಲಿ ಗ್ರಾಮದಲ್ಲಿ ಸಣ್ಣ ಮಾರುಕಟ್ಟೆಯೊಂದು ತಲೆ ಎತ್ತಿತು. ತಿಂಡಿ ತಿನಸು, ಬಳೆ, ಮಕ್ಕಳ ಆಟಿಕೆ ಅಂಗಡಿಗಳು, ಹೆಣ್ಣುಮಕ್ಕಳ ಅಲಂಕಾರಿಕ ವಸ್ತುಗಳ ಮಳಿಗೆಗಳು, ಐಸ್‌ಕ್ರೀಮ್ ಮುಂತಾದವು ಭಕ್ತರನ್ನು ಸೆಳೆದವು.
Read this also : ಅದ್ದೂರಿಯಾಗಿ ನೆರವೇರಿದ ಗಂಗಾಭವಾನಿ ದೇವಿಯ ಜಾರುಟ್ಲು ಜಾತ್ರೆ, ಹರಿದುಬಂದ ಜನಸಾಗರ….!
Karaga Mahostava – ಒನಕೆ ಕರಗದ ವೈವಿಧ್ಯ
ಹೂವಿನ ಕರಗ ಮುಗಿದ ನಂತರ ಒನಕೆ ಕರಗ ಆಚರಣೆ ನಡೆಯಿತು. ಈ ಒನಕೆ ಕರಗದಲ್ಲಿ ಚೊಂಬಿನ ಕರಗ, ಚಿತ್ರಗೋಪುರ ಕರಗ ಮುಂತಾದ ವೈವಿಧ್ಯಮಯ ವಿಧಗಳು ಪ್ರದರ್ಶನಗೊಂಡವು. ಈ ಸಾಂಪ್ರದಾಯಿಕ ಕಲೆ ಮತ್ತು ಭಕ್ತಿಯ ಸಂಯೋಜನೆಯು ಸೋಮೇನಹಳ್ಳಿಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಿತು.