ಕೆಲವು ದಿನಗಳ ಹಿಂದೆಯಷ್ಟೆ ಸ್ಟಾರ್ ನಟ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಸೆಪ್ಟೆಂಬರ್ 30 ರಂದು ದಿಢೀರ್ ಅಸ್ವಸ್ಥಗೊಂಡು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ರಜನಿಕಾಂತ್ ರವರಿಗೆ ಎಂಡೋವಾಸ್ಕುಲರ್ ಚಿಕಿತ್ಸೆ ಮೂಲಕ ಸ್ಟಂಟ್ ಅಳವಡಿಕೆ ಮಾಡಲಾಗಿದೆ. ರಕ್ತನಾಳ ಉಬ್ಬಿದ್ದರಿಂದ ಸ್ಟಂಟ್ ಹಾಕಲಾಗಿತ್ತು. ಇದೀಗ ಚಿಕಿತ್ಸೆ ಪಡೆದುಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ತಮ್ಮ ಅಭಿಮಾನಿಗಳಿಗೆ ಹಾಗೂ ಆತ್ಮೀಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಹಾಕಿರುವ ರಜನಿಕಾಂತ್ ರವರು, ನಾನು ಬೇಗ ಗುಣಮುಖರಾಗಲಿ ಎಂದು ಶುಭ ಕೋರಿದ ನನ್ನ ಎಲ್ಲಾ ರಾಜಕೀಯ ಮಿತ್ರರಿಗೆ, ನನ್ನ ಎಲ್ಲಾ ಚಿತ್ರರಂಗದ ಗೆಳೆಯರಿಗೆ, ನನ್ನ ಎಲ್ಲಾ ಹಿತೈಷಿಗಳಿಗೆ, ಪತ್ರಿಕಾ ಮಾದ್ಯಮವರೂ ಸೇರಿದಂತೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನನ್ನ ಪ್ರೀತಿಸುವ, ಯೋಗಕ್ಷೇಮಕ್ಕಾಗಿ ಪ್ರಾರ್ಥನೆ ಮಾಡಿದ ನಿಮ್ಮೆಲ್ಲರಿಗೂ ನನ್ನ ಪ್ರಾಮಾಣಿಕ ಕೃತಜ್ಞತೆ. ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಪ್ರೀತಿಯ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ರವರಿಗೂ ಹೃತ್ಪೂರ್ವಕ ಧನ್ಯವಾದಗಳು, ಅಮಿತಾಬ್ ಬಚ್ಚನ್ ರವರ ಪ್ರೀತಿ, ಕಾಳಜಿಗೆ ನನ್ನ ಹೃದಯ ಸ್ಪರ್ಶಿಸಿದೆ ಎಂದು ರಜನಿಕಾಂತ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
ಸೆ.30 ರಂದು ರಜನಿಕಾಂತ್ ರವರು ಅನಾರೋಗ್ಯ ನಿಮಿತ್ತ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಟ್ರಾನ್ಸ್ ಕ್ಯಾಥೆಟರ್ ವಿಧಾನ ಬಳಸಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ರಜನಿಕಾಂತ್ ರವರಿಗೆ ಎಂಡೋವಾಸ್ಕುಲರ್ ಚಿಕಿತ್ಸೆ ಮೂಲಕ ಸ್ಟಂಟ್ ಅಳವಡಿಸಲಾಗಿತ್ತು. ಇನ್ನೂ ರಜನಿಕಾಂತ್ ಕೊನೆಯದಾಗಿ ತಮ್ಮ ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶನ ಲಾಲ್ ಸಲಾಮ್ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ಜೈಲರ್ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡಿತ್ತು. ಶೀಘ್ರದಲ್ಲೇ ರಜನಿಕಾಂತ್ ಕೂಲಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದು, ಈ ಸಿನೆಮಾದ ಟೀಸರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು, ಭಾರಿ ನಿರೀಕ್ಷೆ ಮೂಡಿಸಿದೆ.