ಲೋಕಸಭಾ ಚುನಾವಣೆ 2024 ರ ಫಲಿತಾಂಶ ಜೂ.4 ರಂದು ಪ್ರಕಟವಾಗಲಿದೆ. ಈಗಾಗಲೇ ಚುನಾವಣಾ ಪೂರ್ವ ಹಾಗೂ ಚುನಾವಣಾ ನಂತರದ ಸರ್ವೆಗಳಲ್ಲಿ ಬಿಜೆಪಿ ಪಕ್ಷ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಲಾಗಿದೆ. ಆದರೆ ಬಿಜೆಪಿ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ವಿರೋಧ ಪಕ್ಷಗಳ ನಾಯಕರ ಮಾತಾಗಿದೆ. ಇದೀಗ ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್ ಜೂ.4 ರಂದು ನೀರು ನಿಮ್ಮ ಬಳಿಯೇ ಇಟ್ಟುಕೊಳ್ಳಿ ಎಂಬ ಸಂದೇಶವೊಂದನ್ನು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಾಜಕೀಯ ಚಾಣಾಕ್ಷ ಎಂದೇ ಕರೆಯಲಾಗುವ ಪ್ರಶಾಂತ್ ಕಿಶೋರ್ ಚುನಾವಣೆಯಲ್ಲಿ ಯಾವ ಪಕ್ಷಗಳು ಎಷ್ಟು ಸ್ಥಾನ ಗಳಿಸಲಿವೆ, ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಚಾರಗಳ ಬಗ್ಗೆ ಮಾಹಿತಿ ನೀಡುತ್ತಿರುತ್ತಾರೆ. ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಪ್ರಶಾಂತ್ ಕಿಶೋರ್ ಕೆಲವೊಂದು ವಿಚಾರಗಳ ಬಗ್ಗೆ ಮಾತನಾಡಿದ್ದರು. ಇದಾದ ಬಳಿಕ ಅವರು ಟ್ವೀಟ್ ಮಾಡಿದ್ದು, ಅದು ರಾಜಕೀಯವಾಗಿ ಚರ್ಚೆಗೆ ಕಾರಣವಾಗಿದೆ. ಸಂದರ್ಶನದಲ್ಲಿ ಕಳೆದ 2022ರಲ್ಲಿ ಹಿಮಾಚಲ್ ಪ್ರದೇಶದಲ್ಲಿ ತಾವು ನೀಡಿದ್ದ ಸರ್ವೆ ಅದಲು ಬದಲಾಯ್ತು ಎಂದು ಪತ್ರಕರ್ತರ ಅವರಿಗೆ ನೆನಪಿಸಿದರು. ಅದಕ್ಕೆ ಕೌಂಟರ್ ಕೊಟ್ಟ ಪ್ರಶಾಂತ್ 2021ರ ಬೆಂಗಾಲ್ ಚುನಾವಣೆಯಲ್ಲಿ ಟಿಎಂಸಿ ಪಕ್ಷದ ಪರವಾಗಿ ಕೆಲಸ ಮಾಡಿದ್ದರು, ಈ ವೇಳೆ ಟಿಎಂಸಿ 294 ಸ್ಥಾನಗಳ ಪೈಕಿ 215 ಸ್ಥಾನಗಳನ್ನು ಪಡೆದುಕೊಂಡಿತ್ತು. ಅದನ್ನು ಅವರು ಪರ್ತಕತ್ರನಿಗೆ ನೆನಪಿಸಿದರು.
ಅದೇ ಮಾದರಿಯಲ್ಲಿ ನಾನು ಇದೀಗ ಹೇಳಿದ ಪ್ರಿಡಕ್ಷನ್ ಸಹ ನಿಜವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೂ.4 ರಂದು ಪ್ರತಿಯೊಬ್ಬರೂ ನೀರನ್ನು ಹತ್ತಿರದಲ್ಲೇ ಇಟ್ಟುಕೊಳ್ಳಿ, ಚುನಾವಣೆಯ ಫಲಿತಾಂಶ ಬಂದ ಬಳಿಕ ಮನಸು ಹಾಗೂ ಶರೀರ ಎರಡನ್ನೂ ಹೈಡ್ರೇಟ್ ಆಗಿ ಇಟ್ಟುಕೊಳ್ಳಲು ನೀರು ಸಹಾಯ ಆಗುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ. ಅವರ ಈ ಪೋಸ್ಟ್ ಇದೀಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಆಗುತ್ತಿದೆ. ಕಳೆದ ಬುಧವಾರ ಸಂದರ್ಶನವೊಂದರಲ್ಲಿ ಪ್ರಶಾಂತ್ ಕಿಶೋರ್ ಬಿಜೆಪಿ ಸ್ವಂತವಾಗಿ 370 ಸ್ಥಾನಗಳನ್ನು ಪಡೆದುಕೊಳ್ಳುವುದಿಲ್ಲ. ಬಿಜೆಪಿ ಸುಮಾರು 300 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಹೇಳಿದ್ದರು.