ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ತನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ವೈಯುಕ್ತಿಕ ಸ್ಲಾಲರ್ ಶಿಪ್ ಯೋಜನೆಯೊಂದನ್ನು ಘೋಷಣೆ ಮಾಡಿದ್ದಾರೆ. ಈ ಸಂಬಂಧ ಪ್ರದೀಪ್ ಈಶ್ವರ್ ರವರ ಗೃಹ ಕಚೇರಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳಿಗೆ ವೈಯುಕ್ತಿಕ ವಿದ್ಯಾರ್ಥಿ ವೇತನ ಯೋಜನೆಯನ್ನು ಶಾಸಕ ಪ್ರದೀಪ್ ಈಶ್ವರ್ ಘೋಷಣೆ ಮಾಡಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ SSLC, ದ್ವಿತೀಯ ಪಿಯುಸಿ, ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು, ಅಂತಿಮ ವರ್ಷದ ಪಿಜಿ ಹಾಗೂ ಐಟಿಐ ಸೇರಿದಂತೆ ಡಿಪ್ಲೋಮಾದ ಎಲ್ಲಾ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ನೀಡುವುದಾಗಿ ಶಾಸಕ ಪ್ರದೀಪ್ ಈಶ್ವರ್ ಘೋಷಣೆ ಮಾಡಿದರು. ಇನ್ನೂ ಯಾವ ವಿಭಾಗದ ವಿದ್ಯಾರ್ಥಿಗಳಿಗೆ ಎಷ್ಟು ವಿದ್ಯಾರ್ಥಿ ವೇತನ ಸಿಗಲಿದೆ ಎಂಬ ಮಾಹಿತಿಯನ್ನೂ ಸಹ ನೀಡಿದ್ದಾರೆ. ಎಸ್‍ಎಸ್‍ಎಲ್‌ಸಿ ವಿದ್ಯಾರ್ಥಿಗಳಿಗೆ ತಲಾ 1,000 ರೂ., ಡಿಪ್ಲೋಮಾ, ಐಟಿಐ ವಿದ್ಯಾರ್ಥಿಗಳಿಗೆ 1,500 ರೂ., ಪದವಿ ಹಾಗೂ ಪಿಜಿ ವಿದ್ಯಾರ್ಥಿಗಳಿಗೆ 3,000 ರೂ. ವಿದ್ಯಾರ್ಥಿವೇತನ ನೀಡಲು ನಿರ್ಧಾರ ಮಾಡಲಾಗಿದೆ.
ಈ ಸೌಲಭ್ಯವನ್ನು ಪಡೆಯಲು ಚಿಕ್ಕಬಳ್ಳಾಪುರ ಕ್ಷೇತ್ರದ ವಿದ್ಯಾರ್ಥಿಗಳು ಎಂ.ಎಲ್.ಎ ಪ್ರದೀಪ್ ಈಶ್ವರ್ ರವರ ಅಧಿಕೃತ ವೆಬ್ ಸೈಟ್ (https://pradeepeshwarmla.com/) ನಲ್ಲಿ ನೊಂದಾಯಿಸಿಕೊಳ್ಳಬೇಕು. ಇದಕ್ಕಾಗಿ ಕ್ಯೂ.ಆರ್ ಕೋಡ್ ಇರುವ ಸ್ಕ್ಯಾನರ್ ಗಳನ್ನು ಸಿದ್ದಪಡಿಸಲಾಗಿದ್ದು, ಆ ಕೋಡ್ ಸ್ಕ್ಯಾನ್ ಮಾಡಿ ವಿದ್ಯಾರ್ಥಿಗಳು ಮೊಬೈಲ್ ಮೂಲಕವೇ ನೊಂದಾಯಿಸಿಕೊಳ್ಳಬಹುದು. ಯಾವುದೇ ದಾಖಲೆಗಳನ್ನು ನೀಡುವ ಅವಶ್ಯಕತೆಯಿಲ್ಲ. ಅ.15 ರಿಂದ ನ.15 ರವೆರೆಗೂ ವಿದ್ಯಾರ್ಥಿಗಳು ನೊಂದಣಿ ಮಾಡಿಕೊಳ್ಳು ಅವಕಾಶ ಕಲ್ಪಿಸಲಾಗಿದೆ. ಈ ವಿದ್ಯಾರ್ಥಿ ವೇತನ ಸುಮಾರು 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಿಗಲಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.