ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ದೌರ್ಜನ್ಯಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ ಎನ್ನಲಾಗಿದೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಹಿಂದೂ ಅಲ್ಪಸಂಖ್ಯಾತರ ಪ್ರಮುಖ ವಕೀಲ ಇಸ್ಕಾನ್ (ISKCON) ಸಂಸ್ಥೆಯ ಧಾರ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ (Chinmoy Krishna Das Brahmachari) ಅವರನ್ನು ಬಂಧನ ಮಾಡಲಾಗಿದೆ. ಅವರ ಬಂಧನ ಹಾಗೂ ಜಾಮೀನು ನಿರಾಕರಣೆ ಮಾಡಿರುವ ಬಾಂಗ್ಲಾದೇಶದ ವಿರುದ್ದ ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ಆಕ್ರೋಷ ಹೊರಹಾಕಿದ್ದಾರೆ. ಈ ಸಂಬಂಧ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ.
ಬಾಂಗ್ಲಾದ ಹಿಂದೂಗಳ ಮೇಲೆ ದೌರ್ಜನ್ಯಗಳನ್ನು ಖಂಡಿಸಿ ಇಸ್ಕಾನ್ (ISKCON) ಸಂಸ್ಥೆಯ ಧಾರ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಕೆಲವೊಂದು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಾಂಗ್ಲಾ ಪೊಲೀಸರು ಬಂಧನ ಮಾಡಿದ್ದಾರೆ. ಅವರ ಬಂಧನದ ವಿರುದ್ದ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಹಲವು ಕಡೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಧಾಳಿಯ ನಿಯಂತ್ರಣಕ್ಕೆ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಕ್ರಮ ವಹಿಸಬೇಕೆಂದು ಆಂಧ್ರ ಪ್ರದೇಶದ ಡಿಸಿಎಂ ಹಾಗೂ ನಟ ಪವನ್ ಕಲ್ಯಾಣ್ ಒತ್ತಾಯಿಸಿದ್ದಾರೆ.
ಡಿಸಿಎಂ ಪವನ್ ಕಲ್ಯಾಣ್ ರವರ ಪೋಸ್ಟ್ ಇಲ್ಲಿದೆ ನೋಡಿ: Click Here
ಈ ಹಿಂದೆ ಬಾಂಗ್ಲಾದೇಶವನ್ನು ಪಾಕಿಸ್ತಾನದ ಹಿಡಿತದಿಂದ ಮುಕ್ತಗೊಳಿಸಲು ಭಾರತೀಯ ಯೋಧರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಬಾಂಗ್ಲಾ ರಚನೆಗಾಗಿ ಭಾರತೀಯ ಸೇನೆ ರಕ್ತ ಚೆಲ್ಲಿದೆ. ನಮ್ಮ ಸಂಪನ್ಮೂಲಗಳನ್ನು ಸಹ ವ್ಯಯಿಸಲಾಗಿದೆ. ನಮ್ಮ ಭಾರತದ ಯೋಧರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಸ್ಕಾನ್ ಮುಖಂಡ ಚಿನ್ಮೋಯ್ ಕೃಷ್ಣದಾಸ್ ರವರನ್ನು ಬಾಂಗ್ಲಾದೇಶ ಪೊಲೀಸರು ಬಂಧನ ಮಾಡಿರುವುದು ಸರಿಯಲ್ಲ ನಾವೆಲ್ಲರೂ ಒಂದಾಗೋಣ. ಬಾಂಗ್ಲಾದೇಶದಲ್ಲಿನ ನಮ್ಮ ಹಿಂದೂ ಸಹೋದರ ಸಹೋದರಿಯರನ್ನು ಗುರಿಯಾಗಿಸಿ ಈ ರೀತಿ ಮಾಡುತ್ತಿರುವುದು ಸರಿಯಲ್ಲ. ನಾವು @UN @UNinIndia ಮಧ್ಯಪ್ರವೇಶಿಸುವಂತೆ ಮನವಿ ಮಾಡುತ್ತೇವೆ” ಎಂದು ನಟ ಪವನ್ ಕಲ್ಯಾಣ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನೂ ಈ ಸಂಬಂಧ ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಸಹ ಆಕ್ರೋಷ ಹೊರಹಾಕಿದ್ದಾರೆ. ಬಾಂಗ್ಲಾದೇಶ ಹುಟ್ಟಿದ್ದೇ ಭಾರತದಿಂದ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾದ ದೌರ್ಜನ್ಯ, ಅತ್ಯಾಚಾರದ ವಿರುದ್ಧ ಸ್ವಾಮೀಜಿ ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ. ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸುವುದರಲ್ಲಿ ತಪ್ಪೇನಿದೆ? ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆ ಮಾಡಬೇಕಿರುವುದು ಸರ್ಕಾರದ ಜವಾಬ್ದಾರಿ. ಹಿಂದೂ ಸಮಾಜದ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಬಾಯಿಬಿಡಬೇಕು. ಖಂಡನೆ, ಮಂಡನೆ, ಎಚ್ಚರಿಕೆ ಸಾಕು ಮುಂದೆ ಕ್ರಮ ಕೈಗೊಳ್ಳಬೇಕು. ಹುಟ್ಟಿಸಿದಂತೆ ಬಾಂಗ್ಲಾದೇಶಕ್ಕೆ ಸರಿಯಾದ ಬುದ್ದಿ ಕಲಿಸುವ ಕೆಲಸ ಆಗಬೇಕು. ಈ ಸಂಬಂಧ ಪ್ರಧಾನಿ ಮೋದಿ ಕೂಡಲೇ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.