Crime : ಜಾತಿ ಭೂತಕ್ಕೆ ಪ್ರಿಯಕರ ಬಲಿ; ಸ್ಮಶಾನದಲ್ಲೇ ಶವದೊಂದಿಗೆ ಹಸೆಮಣೆ ಏರಿದ ಪ್ರೇಮಿ! ಕಣ್ಣೀರು ತರಿಸುತ್ತೆ ಈ ನೈಜ ಪ್ರೇಮಕಥೆ

ಪ್ರೀತಿ ಅಂದ್ರೆ ಹಾಗೇ ಅಲ್ವಾ? ಅದಕ್ಕೆ ಜಾತಿ, ಮತ, ಧರ್ಮದ ಹಂಗಿರಲ್ಲ. ಮನಸ್ಸುಗಳು ಬೆರೆತಾಗ ಅಲ್ಲಿ ಪ್ರೀತಿ ಮಾತ್ರ ಶಾಶ್ವತವಾಗಿರುತ್ತದೆ. ಆದರೆ, ಈ ಸಮಾಜಕ್ಕೆ, ಅಲ್ಲಿನ ಕೆಲವೊಂದು ಕಟ್ಟುಪಾಡುಗಳಿಗೆ ಪ್ರೀತಿಗಿಂತ ‘ಜಾತಿ’ಯೇ ಮುಖ್ಯವಾಗುತ್ತದೆ. ಇಂತಹ ಜಾತಿ ಎಂಬ ಭೂತಕ್ಕೆ ಇದೀಗ ಮತ್ತೊಂದು ಅಮಾಯಕ ಜೀವ ಬಲಿಯಾಗಿದೆ. ಅತ್ತ ಪ್ರಿಯಕರನ ಪ್ರಾಣಪಕ್ಷಿ ಹಾರಿಹೋಗಿದ್ದರೆ, ಇತ್ತ ಆತನ ಮೃತದೇಹದ ಮುಂದೆಯೇ ಪ್ರಿಯತಮೆ ‘ಮದುವೆ’ಯಾಗಿರುವ ಮನಕಲಕುವ ಘಟನೆ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದಿದೆ.

Crime incident in Nanded where a girl symbolically marries her dead lover after a caste-based honour killing

Crime – ಮರ್ಯಾದಾ ಹತ್ಯೆಯ ಕರಾಳ ಮುಖ

ಮೃತ ದುರ್ದೈವಿ ಯುವಕನನ್ನು 20 ವರ್ಷದ ಸಕ್ಷಮ್ ತಾಟೆ ಎಂದು ಗುರುತಿಸಲಾಗಿದೆ. ಆಂಚಲ್ ಮತ್ತು ಸಕ್ಷಮ್ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆಂಚಲ್ ಸಹೋದರನ ಸ್ನೇಹಿತನಾಗಿದ್ದ ಸಕ್ಷಮ್, ಆಗಾಗ್ಗೆ ಮನೆಗೆ ಬರುತ್ತಿದ್ದಾಗ ಇಬ್ಬರ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿತ್ತು. ಆದರೆ, ಇವರಿಬ್ಬರ ‘ಜಾತಿ’ ಬೇರೆಯಾಗಿದ್ದೇ ಇವರ ಪಾಲಿಗೆ ಮುಳುವಾಯ್ತು. ವಿಷಯ ತಿಳಿದ ಆಂಚಲ್ ಮನೆಯವರು, ಮಗಳ ಪ್ರೀತಿಯನ್ನು ಒಪ್ಪುವ ಬದಲು ದ್ವೇಷದ ದಾರಿ ಹಿಡಿದರು. ಜಾತಿ ಕಾರಣಕ್ಕಾಗಿ ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದರು. ಎಷ್ಟೇ ಬೆದರಿಕೆಗಳು ಬಂದರೂ ಆಂಚಲ್ ತನ್ನ ಪ್ರೀತಿಯನ್ನು ಬಿಟ್ಟುಕೊಟ್ಟಿರಲಿಲ್ಲ.

Crime – ಕಲ್ಲಿನಿಂದ ಜಜ್ಜಿ ಬರ್ಬರ ಹತ್ಯೆ

ತನ್ನ ಮಗಳು ಅನ್ಯ ಜಾತಿಯ ಯುವಕನೊಂದಿಗೆ ಮದುವೆಯಾಗಲಿದ್ದಾಳೆ ಎಂಬ ವಿಷಯ ತಿಳಿದ ಆಂಚಲ್ ತಂದೆ ಮತ್ತು ಸಹೋದರರು ರೊಚ್ಚಿಗೆದ್ದಿದ್ದರು. ಗುರುವಾರ ಸಕ್ಷಮ್ ಮೇಲೆ ಏಕಾಏಕಿ ದಾಳಿ ನಡೆಸಿದ ಅವರು, ಆತನ ಮೇಲೆ ಗುಂಡು ಹಾರಿಸಿದ್ದಲ್ಲದೆ, ಕಲ್ಲಿನಿಂದ ತಲೆಯನ್ನು ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೇವಲ ಜಾತಿಯ ಕಾರಣಕ್ಕೆ ಒಂದು ಜೀವವನ್ನು ಬಲಿ ಪಡೆದಿದ್ದಾರೆ.

Crime – ಶವದ ಮುಂದೆಯೇ ಮಾಂಗಲ್ಯ ಭಾಗ್ಯ!

ಸಕ್ಷಮ್ ಅವರ ಅಂತ್ಯಕ್ರಿಯೆ ನಡೆಯುತ್ತಿದ್ದ ವೇಳೆ ಅಲ್ಲಿಗೆ ಬಂದ ಆಂಚಲ್ ಮಾಡಿದ ಕಾರ್ಯ ಅಲ್ಲಿದ್ದವರ ಕರುಳು ಹಿಂಡುವಂತಿತ್ತು. ಮೃತ ಪ್ರಿಯಕರನ ದೇಹಕ್ಕೆ ಅರಿಶಿನ ಹಚ್ಚಿದ ಆಕೆ, ನಂತರ ತನ್ನ ಹಣೆಗೆ ತಾನೇ ಸಿಂಧೂರವನ್ನು ಇಟ್ಟುಕೊಂಡು, ಶವದೊಂದಿಗೆ ಸಾಂಕೇತಿಕವಾಗಿ ಮದುವೆ ಮಾಡಿಕೊಂಡಿದ್ದಾಳೆ. ಅಷ್ಟೇ ಅಲ್ಲ, “ನನ್ನ ಪ್ರಿಯಕರ ಸತ್ತಿರಬಹುದು, ಆದರೆ ನಾನು ಸಕ್ಷಮ್ ಮನೆಯಲ್ಲೇ ಇರುತ್ತೇನೆ. ನನ್ನ ಉಳಿದ ಜೀವನವನ್ನು ಆತನ ಪೋಷಕರನ್ನು ನೋಡಿಕೊಳ್ಳುತ್ತಾ, ಅವರಿಗೆ ಸೊಸೆಯಾಗಿ ಕಳೆಯುತ್ತೇನೆ” ಎಂದು ಸ್ಮಶಾನದಲ್ಲೇ ಶಪಥ ಮಾಡಿದ್ದಾಳೆ. Read this also : ಲಂಡನ್‌ನಿಂದ ಬಂದವನಿಗೆ ಮಸಣವೇ ಗತಿಯಾಯ್ತು! ಪ್ರೀತಿಸಿದವಳು ಸಿಗಲಿಲ್ಲವೆಂದು ಪ್ರಾಣ ಬಿಟ್ಟ ಟೆಕ್ಕಿ..!

Crime incident in Nanded where a girl symbolically marries her dead lover after a caste-based honour killing

Crime – “ನಮ್ಮ ಪ್ರೀತಿ ಗೆದ್ದಿದೆ, ನನ್ನ ತಂದೆ ಸೋತಿದ್ದಾರೆ”

ದುಃಖದ ಮಡುವಿನಲ್ಲಿದ್ದ ಆಂಚಲ್, “ನೋಡು ಸಕ್ಷಮ್, ಸಾವಿನಲ್ಲೂ ನಮ್ಮ ಪ್ರೀತಿ ಗೆದ್ದಿದೆ. ಆದ್ರೆ ನನ್ನ ತಂದೆ ಮತ್ತು ಸಹೋದರರು ಸೋತಿದ್ದಾರೆ. ನೀನು ಮೃತಪಟ್ಟಿರಬಹುದು, ಆದರೆ ನಮ್ಮ ಪ್ರೀತಿ ಇನ್ನೂ ಜೀವಂತವಾಗಿದೆ” ಎಂದು ಕಣ್ಣೀರಿಟ್ಟಿದ್ದಾಳೆ. ತನ್ನ ಪ್ರಿಯಕರನ ಹತ್ಯೆಗೈದ ತನ್ನದೇ ಕುಟುಂಬದವರಿಗೆ ಮರಣದಂಡನೆ ವಿಧಿಸಬೇಕೆಂದು ಆಕೆ ಆಗ್ರಹಿಸಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತ್ವರಿತ ಕಾರ್ಯಚರಣೆ ನಡೆಸಿದ್ದು, ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ.

Leave a Comment

Your email address will not be published. Required fields are marked *

Scroll to Top