ಕೆಲವು ದಿನಗಳ ಹಿಂದೆಯಷ್ಟೆ ನಂದಿನ ಹಾಲಿನ ದರವನ್ನು ಸರ್ಕಾರ ಏರಿಕೆ ಮಾಡಿತ್ತು. ಇದೀಗ ಮತ್ತೊಮ್ಮೆ ಹಾಲಿನ ದರ ಏರಿಕೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಕರ್ನಾಟಕದಲ್ಲಿ ನಂದಿನ ಹಾಲಿನ ದರ ಹೆಚ್ಚಳ ಮಾಡುತ್ತೇವೆ. ಹೆಚ್ಚಳ ಮಾಡಿದ ಆ ದರವನ್ನು ರೈತರಿಗೆ ತಲುಪುವಂತೆ ಮಾಡುತ್ತೇವೆ (Milk Price Hike) ಎಂದು ಹೇಳಿದ್ದಾರೆ. ಈ ಸಂಬಂಧ ಸಭೆ ಕರೆದು ಮಾತುಕತೆ ನಡೆಸಿದ ಬಳಿಕ ಹಾಲಿನ ದರ ಹೆಚ್ಚಳ ಮಾಡೋಣ ಎಂದು ಹೇಳಿದ್ದು, ಇದು ಜನಸಾಮಾನ್ಯರ ಮೇಲೆ ಹೊರೆ ಬೀಳಲಿದೆ ಎಂದು ಹೇಳಬಹುದಾಗಿದೆ.

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹೊಸಪೇಟೆಯಲ್ಲಿ (Hosapete) ನೂತನ ಬಮೂಲ್ (Bamul) ಕಚೇರಿ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ನೀವು ನಮಗೆ ಸಹಕಾರ ನೀಡಿದರೆ ಹಾಲಿನ Milk Price Hike)ದರವನ್ನು ಹೆಚ್ಚಳ ಮಾಡ್ತೀವಿ. ಆ ಹಣವನ್ನು ರೈತರಿಗೆ ಕೊಡ್ತೀವಿ ಎಂದು ದರ ಏರಿಕೆಯ ಕುರಿತು ಪರೋಕ್ಷವಾಗಿ ಮುನ್ಸೂಚನೆ ನೀಡಿದರು. ಇನ್ನೂ ಜೆಡಿಎಸ್ (JDS) ವಿರುದ್ದವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾವು ರೈತರ ಮಕ್ಕಳು, ರೈತರ ಮಕ್ಕಳು ಎಂದು ಹೇಳುತ್ತಾರೆ. ಆದರೆ ರೈತರ ಮಕ್ಕಳಿಗೆ ನೀವೇನು ಕೊಟ್ಟಿದ್ದೀರಾ, ಏನನ್ನೂ ಮಾಡದೇ ನಾವು ರೈತರ ಮಕ್ಕಳು ಅಂತಾ ಹೇಳ್ತಾರೆ ಅಂತಾ ಜೆಡಿಎಸ್ ವಿರುದ್ದ ಕಿಡಿಕಾರಿದರು.

ಇನ್ನೂ ನಾನು ಸಿಎಂ ಆಗಿದ್ದಾಗ ಕೆಂಪೇಗೌಡರ ಜಯಂತಿ (Kempegowda Jayanthi) ಆಚರಣೆ ಮಾಡಿದ್ದು, ಕರ್ನಾಟಕದಲ್ಲಿ ಬಹಳಷ್ಟು ಒಕ್ಕಲಿಗ ನಾಯಕರು ಅನ್ನಿಸಿಕೊಂಡವರು ಮಾಡಲಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಟಾಂಗ್ ಕೊಟ್ಟರು. ಇನ್ನೂ ನಮ್ಮ ಸರ್ಕಾರ ಮಾಗಡಿಯ ಸರ್ವತೋಮುಖ ಅಭಿವೃದ್ದಿಗೆ ಸಹಕಾರ ಕೊಡುತ್ತೇವೆ. ಬಾಲಕೃಷ್ಣಾಗೆ ಸಚಿವರಾಗುವ ಅರ್ಹತೆಯಿದೆ. ಆದರೆ ಮುಖ್ಯಮಂತ್ರಿ ಸೇರಿ 34 ಮಂದಿಗೆ ಮಾತ್ರ ಅವಕಾಶವಿದೆ. ಆದರೆ ಅವರು ಮಂತ್ರಿ ಆಗದೇ ಇದ್ದರೂ ಅಭಿವೃದ್ದಿ ಕೆಲಸದಲ್ಲಿ ಮುಂಚೂಣಿಯಲ್ಲಿದ್ದಾರೆ. ಗ್ಯಾರಂಟಿಗಳಿಂದ ಅಭಿವೃದ್ದಿ ಕೆಲಸಗಳು ನಡೆದಿಲ್ಲ, ಅದಕ್ಕೆ ಅನುದಾನವಿಲ್ಲ ಅಂತಾ ಬಿಜೆಪಿಯವರು ಹೇಳುತ್ತಾರೆ. ಆದರೆ 120 ಕೋಟಿ ಅಭಿವೃದ್ದಿ ಕೆಲಸಗಳು ಹೇಗೆ ನಡೆಯಿತು. ಬಿಜೆಪಿ (BJP) ಪಕ್ಷದವರು ಬರೀ ಸುಳ್ಳು ಹೇಳ್ತಾರೆ ಅಷ್ಟೇ ಎಂದು ಕುಟುಕಿದ್ದಾರೆ.