Local News – ಸಮಾಜದಲ್ಲಿನ ಅಂಕುಡೊಂಕುಗಳನ್ನು, ಜಾತಿ ಪದ್ದತಿ, ಅಶ್ಪೃಶ್ಯತೆ ಸೇರಿದಂತೆ ಹಲವು ಅನಿಷ್ಟ ಪದ್ದತಿಗಳನ್ನು ತೊಡೆದುಹಾಕುವಲ್ಲಿ ಶ್ರಮಿಸಿದಂತಹ ಮಹನೀಯರನ್ನು ನಾವೆಲ್ಲರೂ ಸದಾ ಸ್ಮರಿಸಬೇಕು, ಅವರ ಆದರ್ಶಗಳನ್ನು ಪಾಲನೆ ಮಾಡಬೇಕೆಂದು ನ್ಯೂ ವಿಷನ್ ಶಾಲೆಯ ಮುಖ್ಯ ಶಿಕ್ಷಕಿ ಡಿ.ಎಲ್.ಪರಿಮಳ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಯೋಗಿ ವೇಮನ ಹಾಗೂ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ವೇಮನರು ತಮ್ಮ ವಚನಗಳ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ವ್ಯಕ್ತಿಯಾಗಿದ್ದಾರೆ. ಮಹಾಯೋಗಿ ವೇಮನ 15 ನೇ ಶತಮಾನದ ತೆಲಗು ಕವಿಗಳಲ್ಲಿ ಪ್ರಮುಖ ಹೆಸರು. ಕನ್ನಡದ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ತೆಲುಗಿಗೆ ವೇಮನ ಮಹಾಕವಿಗಳಾಗಿದ್ದಾರೆ. ಸಮಾಜದಲ್ಲಿ ಮೂಡನಂಬಿಕೆಗಳನ್ನು ತೊಡೆದು ಹಾಕುವಲ್ಲಿ ಶ್ರಮಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಸರಳವಾದ ಕಾವ್ಯಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಮಹಾನ್ ಚೇತನರು. ಅದೇ ರೀತಿ ರಾಷ್ಟ್ರ ಕವಿ ಕುವೆಂಪು ರವರನ್ನು ದಾರ್ಶನಿಕ ಕವಿ ಎಂದೇ ಕರೆಯಬೇಕು. ಕುವೆಂಪು ಒಬ್ಬ ಶ್ರೇಷ್ಠ ಕವಿ. ಅವರು ತಮ್ಮ ಆಲೋಚನೆಗಳನ್ನು ಸಾಹಿತ್ಯ ಹಾಗೂ ಕೃತಿಗಳ ಮೂಲಕ ಸಮಾಜಕ್ಕೆ ನೀಡಿದ್ದು, ಅವರ ಈ ಬರಹಗಳು ಹಲವಾರು ಸಾಮಾಜಿಕ ಸುಧಾರಣೆ ತಂದಿದೆ. ಮಾನವನನ್ನು ವಿಶ್ವ ಮಾನವ ಮಾಡಬೇಕೆನ್ನುವುದು ಕುವೆಂಪು ಕನಸಾಗಿದ್ದು, ಪ್ರತಿಯೊಬ್ಬರಲ್ಲೂ ಇರುವ ವ್ಯಕ್ತಿ ಸ್ವಾತಂತ್ರ್ಯ ವನ್ನು ಗೌರವಿಸಬೇಕು ಎನ್ನುವುದು ಇದರ ನಿಯಮ. ಆದ್ದರಿಂದ ಅವರು ಹುಟ್ಟಿದ ದಿನವನ್ನು ವಿಶ್ವಮಾನವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಪ್ರಸ್ತಾವಿಕ ನುಡಿಗಳನ್ನಾಡಿ, ವೇಮನ ಬಾಲ್ಯದಿಂದಲೂ ಎಲ್ಲರಂತೆ ಬೋಗ ಜೀವನವನ್ನು ಮಾಡಿಕೊಂಡು ಸಣ್ಣ-ಪುಟ್ಟ ತಪ್ಪುಗಳನ್ನು ಮಾಡಿ ಜೀವನ ನಡೆಸುತ್ತಿದ್ದರು. ಅವರ ತಪ್ಪುಗಳನ್ನು ತಿಳಿಯುವಂತೆ ಮಾಡಿದ ಅವರ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮ, ಅವರನ್ನು ತಿದ್ದಿ ಸಾತ್ವಿಕಾ ಜೀವನದತ್ತ ಹೋಗುವಂತೆ ಮಾಡಿದರು. ಅಂದಿನಿಂದ ಜೀವನದ ಬಗ್ಗೆ ಜುಗುಪ್ಸೆ ಹೊಂದಿ ತತ್ತ್ವಜ್ಞಾನ ಹೇಳುತ್ತಾ ತಾನು ನಗ್ನನಾಗಿ ವೈರಾಗಿಯಂತೆ ಹೊರಟ ವೇಮನ ತನ್ನ ಸಾಧನೆಯ ಮೂಲಕ ಮಹಾ ಯೋಗಿಯಾಗಿ ದೈವತ್ವದ ಮುಖ ಮಾಡಿದರು. ಜನರನ್ನು ಸಹ ತಮ್ಮ ವಚನಗಳ ಮೂಲಕ ಧಾರ್ಮಿಕತೆಯ ಕಡೆಗೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದರು. ಇಂತಹ ಮಹಾನ್ ಚೇತನ ಇಡೀ ಮಾನವ ಸಂಕುಲಕ್ಕೆ ಆದರ್ಶಪ್ರಾಯವಾಗಿದ್ದಾರೆ. ಜೊತೆಗೆ ವೇಮನರನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡದೇ ಎಲ್ಲರೂ ಅವರ ವಚನಗಳನ್ನು, ಆದರ್ಶಗಳನ್ನು ಪಾಲನೆ ಮಾಡಬೇಕೆಂದರು.
ಇದೇ ಸಮಯದಲ್ಲಿ ತಾ.ಪಂ ಇ.ಒ ನಾಗಮಣಿ, ವಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್, ಕೆಡಿಪಿ ಸದಸ್ಯ ಲಕ್ಷ್ಮೀನಾರಾಯಣ, ತಹಸೀಲ್ದಾರ್ ಸಿಗ್ಬತ್ತುಲ್ಲಾ ರವರು ವೇಮನರು ಹಾಗೂ ಕುವೆಂಪು ರವರ ಬಗ್ಗೆ ಮಾತನಾಡಿದರು. ಈ ವೇಳೆ ಪಪಂ ಅಧ್ಯಕ್ಷ ವಿಕಾಸ್, ಸಮಾಜ ಕಲ್ಯಾಣ ಇಲಾಖೆಯ ಲಕ್ಷ್ಮೀಪತಿರೆಡ್ಡಿ, ಬಿಸಿಎಂ ಇಲಾಖೆಯ ಶಂಕರಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಟಿಪಿಒ ಮುರಳಿ, ಮುಖಂಡರಾದ ವೇಣುಗೋಪಾಲ, ಬಾಲಕೃಷ್ಣಾರೆಡ್ಡಿ, ನಾರಾಯಣಸ್ವಾಮಿ ಸೇರಿದಂತೆ ಹಲವರು ಇದ್ದರು.